ಕೊಲಂಬಿಯಾ: 3,100 ಗರ್ಭಿಣಿಯರಿಗೆ ಝಿಕಾ ಸೋಂಕು
ಕೊಲಂಬಿಯಾ, ಫೆ.7: ದೇಶದಲ್ಲಿ 3,100ಕ್ಕೂ ಹೆಚ್ಚು ಗರ್ಭಿಣಿಯರಿಗೆ ಝಿಕಾ ಸೋಂಕು ತಗಲಿದೆ ಎಂದು ದೇಶದ ಅಧ್ಯಕ್ಷರು ಅಧಿಕೃತವಾಗಿ ಘೋಷಿಸಿದ್ದಾರೆ.
ದೇಶದಲ್ಲಿ ಇದುವರೆಗೆ 25,645 ಝಿಕಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಅಮೆರಿಕದಾದ್ಯಂತ ಈ ಸೊಳ್ಳೆಯಿಂದ ಹರಡುವ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹಬ್ಬುತ್ತಿದೆ. ದೇಶದಲ್ಲಿ ವರ್ಷಾಂತ್ಯಕ್ಕೆ ಸುಮಾರು ಆರು ಲಕ್ಷ ಪ್ರಕರಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅಧ್ಯಕ್ಷ ಜುವಾನ್ ಮ್ಯಾನ್ಯುಯಲ್ ಸಾಂಟೋಸ್ ಹೇಳಿದ್ದಾರೆ.
ಸದ್ಯಕ್ಕೆ ಝಿಕಾ ಸೋಂಕಿಗೆ ಯಾವುದೇ ಚಿಕಿತ್ಸೆ ಅಥವಾ ಲಸಿಕೆ ಇಲ್ಲ. ಇದು ಮೈಕ್ರೊಸೆಫ್ಲಿ ಎಂಬ ದೋಷಯುಕ್ತ ಮಕ್ಕಳ ಹುಟ್ಟಿಗೆ ಕಾರಣವಾಗಲಿದ್ದು, ಇಂತಹ ಮಕ್ಕಳು ತೀರಾ ಚಿಕ್ಕತಲೆಗಳನ್ನು ಹೊಂದಿರುತ್ತಾರೆ. ಇದರಿಂದ ಮೆದುಳಿನ ಬೆಳವಣಿಕೆ ಅಸಮರ್ಪಕವಾಗಲಿದೆ. ಆದರೆ ಝಿಕಾ ಸೋಂಕಿನಿಂದ ತೊಂದರೆಗೊಳಗಾದ ಮಕ್ಕಳು ಇದುವರೆಗೆ ದೇಶದಲ್ಲಿ ಹುಟ್ಟಿಲ್ಲ ಎಂದು ಸಾಂಟೋಸ್ ಹೇಳಿದ್ದಾರೆ.
ವೀಡಿಯೊ ಕಾನ್ಫರೆನ್ಸ್‌ನಲ್ಲಿ ಅಧ್ಯಕ್ಷರು ಆರೋಗ್ಯ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದು, ಗುಲಿಯಲ್ ಬರ್ರೆ ಲಕ್ಷಣದ ಒಂದು ಸಾವಿರ ಪ್ರಕರಣಗಳು ಎದುರಾಗಲಿವೆ ಎಂದು ಹೇಳಿದ್ದಾರೆ. ಈ ಅಪರೂಪದ ಪರಿಸ್ಥಿತಿಯಲ್ಲಿ, ದೇಹದ ಪ್ರತಿರೋಧ ಶಕ್ತಿ ಕುಗ್ಗಿ, ವೈರಸ್ ನರಮಂಡಲಕ್ಕೆ ದಾಳಿ ಮಾಡುತ್ತದೆ. ಇದು ಪಾರ್ಶ್ವವಾಯುವಿಗೂ ಕಾರಣವಾಗುತ್ತದೆ. ಇಂಥ ಪ್ರಕರಣಗಳು ದಕ್ಷಿಣ ಅಮೆರಿಕದ ಕೆಲ ದೇಶಗಳಲ್ಲಿ ಕಂಡುಬಂದಿದ್ದು, ಇದಕ್ಕೂ ಝಿಕಾ ಸೋಂಕು ಕಾರಣ ಎನ್ನಲಾಗಿದೆ.
ಶುಕ್ರವಾರ ಝಿಕಾ ಸೋಂಕಿನಿಂದ ಮೂವರು ಕೊಲಂಬಿಯಾದಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ರೋಗದಿಂದ ಮೃತಪಟ್ಟ ಬಗ್ಗೆ ವರದಿಯಾಗಿರುವುದು ಇದೇ ಮೊದಲು.