‘ಮುದ್ರಾ ಯೋಜನೆಯಡಿ 1 ಲಕ್ಷ ಕೋಟಿ ರೂ. ಸಾಲ ವಿತರಣೆ’
ಪಾರಾದೀಪ (ಒಡಿಶಾ),ಫೆ.7: ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸಣ್ಣ ಉದ್ಯಮಿಗಳಿಗೆ ಸುಮಾರು ಒಂದು ಲಕ್ಷ ಕೋ.ರೂ.ಗಳ ಸಾಲಗಳನ್ನು ವಿತರಿಸಲಾಗಿದೆ ಎಂದು ರವಿವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಯುವಜನತೆ ಉದ್ಯೋಗಗಳನ್ನು ಸೃಷ್ಟಿಸಬೇಕೇ ಹೊರತು ಉದ್ಯೋಗಗಳ ಬೆನ್ನು ಬೀಳಬಾರದು ಎಂದು ಸರಕಾರವು ಬಯಸುತ್ತಿದೆ ಎಂದು ಅವರು ಒತ್ತಿ ಹೇಳಿದರು.
34,555 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಭಾರತೀಯ ತೈಲ ನಿಗಮದ ಪಾರಾದೀಪ ತೈಲ ಸಂಸ್ಕರಣಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳ ಜೊತೆಗೆ ಯುವಜನತೆ ಸ್ವಾವಲಂಬಿಗಳಾಗಿ ಸ್ವಂತ ಉದ್ಯಮಗಳನ್ನು ಆರಂಭಿಸಬೇಕು. ಆ ಮೂಲಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಂತಾಗಲು ‘‘ವ್ಯಕ್ತಿಗತ ಕ್ಷೇತ್ರ’’ವನ್ನು ಅಭಿವೃದ್ಧಿಗೊಳಿಸುವ ಅಗತ್ಯವಿದೆ ಎಂದು ಹೇಳಿದರು.
ಯುವಜನತೆ ಉದ್ಯೋಗದ ಬೆನ್ನು ಬೀಳಬಾರದು. ಅವರು ಉದ್ಯೋಗಗಳನ್ನು ಸೃಷ್ಟಿಸುವವರಾಗಬೇಕು ಮತ್ತು ಒಬ್ಬರು,ಇಬ್ಬರು ಅಥವಾ ಐವರಿಗೆ ಉದ್ಯೋಗ ನೀಡುವಂತಾಗಬೇಕು ಎಂದು ನಾವು ಬಯಸಿದ್ದೇವೆ. ಆದ್ದರಿಂದ ಮುದ್ರಾ ಯೋಜನೆಯಡಿ ಯುವಜನತೆಗೆ ಆರ್ಥಿಕ ನೆರವು ಒದಗಿಸುತ್ತಿದ್ದೇವೆ. ನಾವೀಗಾಗಲೇ ಸುಮಾರು ಒಂದು ಲಕ್ಷ ಕೋ.ರೂ.ಗಳನ್ನು ವಿತರಿಸಿದ್ದೇವೆ. ಇಷ್ಟೊಂದು ಕಡಿಮೆ ಅವಧಿಯಲ್ಲಿ ಇಷ್ಟೊಂದು ಜನರಿಗೆ ಇಷ್ಟೊಂದು ಹಣವನ್ನು ವಿತರಿಸುವುದು ಸಣ್ಣ ವಿಷಯವಲ್ಲ ಎಂದರು.
ಕಳೆದ ವರ್ಷದ ಎಪ್ರಿಲ್‌ನಲ್ಲಿ ಆರಂಭಿಸಲಾದ ಮುದ್ರಾ ಯೋಜನೆಯಡಿ ಸಣ್ಣ ಉದ್ಯಮಿಗಳಿಗೆ 50,000 ರೂ.ಗಳಿಂದ 10 ಲ.ರೂ.ವರೆಗೆ ಸಾಲಗಳನ್ನು ನೀಡಲಾಗುತ್ತಿದೆ.
ಭಾರತದ ಜನಸಂಖ್ಯೆಯ ಶೇ.65ರಷ್ಟು ಜನರು 35 ವರ್ಷಗಳಿಗೂ ಕಡಿಮೆ ವಯೋಮಾನದವರಾಗಿದ್ದಾರೆ ಮತ್ತು ಈ ಯುವಜನತೆಯ ಏಳಿಗೆಗಾಗಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಅಗತ್ಯವಿದೆ ಎಂದು ಮೋದಿ ನುಡಿದರು. ಸರಕಾರವು ಪ್ರತಿ ವ್ಯಕ್ತಿಯನ್ನು ಮತ್ತು ಪ್ರತಿ ಕುಟುಂಬವನ್ನು ಸ್ವಾವಲಂಬಿಯಾಗಿಸುವ ಆರ್ಥಿಕ ನೀತಿಯೊಂದಿಗೆ ಮುನ್ನಡೆಯುತ್ತಿದೆ ಎಂದರು.