×
Ad

ಮಹಾರಾಷ್ಟ್ರದಲ್ಲೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ

Update: 2016-02-07 23:40 IST

ಮುಂಬೈ, ಫೆ.7: ಮಹಾರಾಷ್ಟ್ರದಲ್ಲಿನ್ನು ದ್ವಿಚಕ್ರ ವಾಹನಗಳ ಹಿಂಬದಿ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ.ಬಾಂಬೆ ಹೈಕೋರ್ಟ್‌ನ ಆದೇಶದಂತೆ ಈ ಸಂಬಂಧ ಸುತ್ತೋಲೆಯೊಂದನ್ನು ರಾಜ್ಯದ ಸಾರಿಗೆ ಇಲಾಖೆ ಶನಿವಾರ ಹೊರಡಿಸಿದೆ.
ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರು ಹೆಲ್ಮೆಟ್ ಧರಿಸುವುದನ್ನು ಬಾಂಬೆ ಹೈಕೋರ್ಟ್ ಕಡ್ಡಾಯಗೊಳಿಸಿದೆ. ಹೈಕೋರ್ಟ್‌ನ ಆದೇಶಗಳು ಅನುಷ್ಠಾನವಾಗುವಂತೆ ಖಚಿತಪಡಿಸುವುದು ಸರಕಾರದ ಹೊಣೆಯಾಗಿದೆ. ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು, ಹೊಸ ಪರವಾನಿಗೆ ಬಯಸುವವರು ದ್ವಿಚಕ್ರ ವಾಹನದ ಮುಂಬದಿ ಹಾಗೂ ಹಿಂಬದಿ ಸವಾರರಿಬ್ಬರೂ ಹೆಲ್ಮೆಟ್ ಧರಿಸುತ್ತೇವೆಂದು ಲಿಖಿತವಾಗಿ ನೀಡಬೇಕಾಗುತ್ತದೆಂದು ಸಾರಿಗೆ ಇಲಾಖೆಯ ಸುತ್ತೋಲೆ ತಿಳಿಸಿದೆ.
ದ್ವಿಚಕ್ರ ವಾಹನ ಮಾರಾಟಗಾರರು ಇನ್ನು ಮುಂದೆ ಗಿರಾಕಿಗಳಿಗೆ 2 ಹೆಲ್ಮೆಟ್ ಮಾರಬೇಕು. ನೋಂದಣಿಯ ವೇಳೆ, ಇತರ ದಾಖಲೆಗಳೊಂದಿಗೆ 2 ಹೆಲ್ಮೆಟ್ ನೀಡಿರುವ ಬಗ್ಗೆ ಪುರಾವೆಯೊದಗಿಸಬೇಕೆಂದು ಪ್ರಾದೇಶಿಕ ಸಾರಿಗೆ ಕಚೇರಿ ನಿರ್ದೇಶನ ನೀಡಿದೆ.
ಸಾರಿಗೆ ಇಲಾಖೆಯ ಈ ನಿರ್ಧಾರಕ್ಕೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ (ಎಂಎನ್‌ಎಸ್) ವರಿಷ್ಠ ರಾಜ್ ಠಾಕ್ರೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಇಂತಹ ಆದೇಶಗಳನ್ನು ಹೊರಡಿಸುವ ಬದಲು, ಸರಕಾರ ಈಗಿರುವ ರಸ್ತೆಗಳ ಅಭಿವೃದ್ಧಿಯ ಮೇಲೆ ಗಮನ ನೀಡಲೆಂದು ಅವರು ಹೇಳಿದ್ದಾರೆ.
ಆದರೆ, ಸರಕಾರದ ಆದೇಶದ ಕುರಿತು ಅಸಮಾಧಾನವಿರುವವರು ನ್ಯಾಯಾಲಯಕ್ಕೆ ಹೋಗಬಹುದೆಂದು ರಾಜ್ಯದ ಸಾರಿಗೆ ಸಚಿವ ದಿವಾಕರ ರಾವುತೆ ತಿರುಗೇಟು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News