ಮೇಕ್ ಇನ್ ಇಂಡಿಯಾದಿಂದ ದುಬಾರಿ ಔಷಧಗಳ ಕೊಡುಗೆ
ಈಗಾಗಲೇ ಆಹಾರ ಪದಾರ್ಥಗಳ ಬೆಲೆ ದುಬಾರಿಯಾಗುತ್ತಿದೆ. ಶಿಕ್ಷಣ ಶುಲ್ಕ ದುಬಾರಿಯಾಗುತ್ತಿದೆ. ಇನ್ನು ಆರೋಗ್ಯದ ಸರದಿ. ಕ್ಯಾನ್ಸರ್, ಎಚ್‌ಐವಿಗಳಂತಹ ಮಾರಕ ರೋಗಗಳ ಚಿಕಿತ್ಸೆಯಲ್ಲಿ ಬಳಕೆಯಾಗುವ ಸುಮಾರು 74 ಔಷಧಗಳ ಬೆಲೆ ದುಬಾರಿಯಾಗಲಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಮತ್ತು ಈ ಔಷಧಗಳ ದುಬಾರಿಯು ‘ಮೇಕ್ ಇನ್ ಇಂಡಿಯಾ’ ಯೋಜನೆಯ ಒಂದು ಭಾಗವಂತೆ. ಈ ದುಬಾರಿ ಔಷಧಗಳನ್ನು ದೇಶದ ಜನರಿಗೆ ಕೊಡುಗೆಯ ರೂಪದಲ್ಲಿ ಸರಕಾರ ಘೋಷಿಸಿದೆ. ದೇಶೀಯ ಔಷಧ ತಯಾರಿಕೆ ಉದ್ಯಮವನ್ನು ರಕ್ಷಿಸುವ ಮತ್ತು ‘ಮೇಕ್ ಇನ್ ಇಂಡಿಯಾ ಅಭಿಯಾನ’ವನ್ನು ಇನ್ನಷ್ಟು ಆಕರ್ಷಕವಾಗಿಸುವ ಉದ್ದೇಶದಿಂದ ಮೂಲ ಸೀಮಾಸುಂಕ ವಿನಾಯಿತಿಯನ್ನು ಹಿಂದೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ತಿಳಿಸಿದೆ. ತೆರಿಗೆ ವಿನಾಯಿತಿ ಹಿಂದೆಗೆದುದರಿಂದ, ಔಷಧದ ಬೆಲೆ ತೀರಾ ದುಬಾರಿಯಾಗಲಿವೆ. ಕಿಡ್ನಿ, ಕ್ಯಾನ್ಸರ್, ಸಕ್ಕರೆ ಕಾಯಿಲೆ, ಹೃದ್ರೋಗ ಸಂಬಂಧಿಸಿದ ಎಲ್ಲ ಔಷಧಗಳೂ ಇನ್ನು ಮುಂದೆ ದುಬಾರಿಯಾಗಲಿದೆ. ಹೀಗೆ ವಿದೇಶಿ ಕಂಪೆನಿಗಳ ಔಷಧ ದುಬಾರಿಯಾಗುವುದರಿಂದ, ದೇಶೀಯ ಔಷಧ ತಯಾರಿಕೆ ಉದ್ಯಮ ಹೇಗೆ ಬೆಳೆಯುತ್ತದೆ ಮತ್ತು ‘ಮೇಕ್ ಇನ್ ಇಂಡಿಯಾ ಅಭಿಯಾನ’ ಹೇಗೆ ಯಶಸ್ವಿಯಾಗುತ್ತದೆ ಎನ್ನುವುದು ಇನ್ನೂ ಸ್ಪಷ್ಟವಿಲ್ಲ. ಆದರೆ ಬಡವರ ಪಾಲಿಗೆ ಆರೋಗ್ಯ ದುಬಾರಿಯಾಗುವುದಂತೂ ಸತ್ಯ. ಸದ್ಯದ ಸಂದರ್ಭದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯೂ ಈ ದೇಶದಲ್ಲಿ ಬಡವರಿಗೆ ಅನಾರೋಗ್ಯವನ್ನು ಹೆಚ್ಚು ಹೆಚ್ಚು ಉತ್ಪಾದಿಸಿ ಕೊಡಲಿದೆ.
ಒಂದು ಕಾಲದಲ್ಲಿ ಕ್ಯಾನ್ಸರ್ ಎನ್ನುವುದು ಶ್ರೀಮಂತರ ರೋಗ ಎಂಬ ಕಲ್ಪನೆಯಿತ್ತು. ಆದರೆ ಈ ರೋಗ ಇಂದು ಬಡವರ ಮನೆಯ ಜೋಪಡಿಯನ್ನೂ ಹೊಕ್ಕು, ಎಲ್ಲರನ್ನೂ ಶ್ರೀಮಂತರನ್ನಾಗಿಸಿದೆ. ಎಚ್‌ಐವಿ, ಕ್ಷಯ, ಹೃದಯಕ್ಕೆ ಸಂಬಂಧಿಸಿದ ರೋಗಗಳು, ಸಕ್ಕರೆ ಕಾಯಿಲೆ ಇವೆಲ್ಲದರ ನೇರ ಬಲಿಪಶುಗಳು ಬಡವರು ಮತ್ತು ಮಧ್ಯಮ ವರ್ಗ. ಶ್ರೀಮಂತ ವರ್ಗಕ್ಕೆ ಐಶಾರಾಮೀ ಆಸ್ಪತ್ರೆಗಳಿವೆ. ಆದರೆ ಕೆಳವರ್ಗಕ್ಕೆ ಇಂತಹ ರೋಗಗಳು ಬಂದರೆ ಅವರಿಗೆ ಸಾವೇ ಗತಿ. ಇಂತಹ ಮಾರಕ ಕಾಯಿಲೆಯ ಔಷಧಗಳಿಗೆ ಸಂಬಂಧಿಸಿದಂತೆ ಭಾರತವಿನ್ನೂ ಸ್ವಾವಲಂಬಿಯಾಗಿಲ್ಲ. ಹೆಚ್ಚಿನ ಮಾರಕ ರೋಗಗಳಿಗೆ ಸಂಬಂಧಿಸಿದ ಔಷಧಗಳು ವಿದೇಶಿ ಕಂಪೆನಿಗಳು ತಯಾರಿಸುತ್ತವೆಯಾದುದರಿಂದ, ಆ ಔಷಧಗಳು ಜನಸಾಮಾನ್ಯರ ಕೈಗೆಟಕಬೇಕು ಎಂಬ ಕಾರಣದಿಂದ ಅವುಗಳ ಮೇಲಿನ ಸುಂಕಕ್ಕೆ ಸರಕಾರ ವಿನಾಯಿತಿಯನ್ನು ನೀಡಿತ್ತು. ಎಲ್ಲರಿಗೂ ಆಹಾರ ದೊರಕಿಸುವುದು ಹೇಗೆ ಸರಕಾರದ ಕರ್ತವ್ಯವೋ ಹಾಗೆಯೇ ಎಲ್ಲರಿಗೂ ಆರೋಗ್ಯವನ್ನು ದೊರಕಿಸುವಂತೆ ನೋಡುವುದೂ ಸರಕಾರದ ಕರ್ತವ್ಯದ ಭಾಗವಾಗಿದೆ. ಹಣವಿದ್ದವರಿಗಷ್ಟೇ ಆರೋಗ್ಯ ಎನ್ನುವುದು ಬದುಕುವ ಹಕ್ಕಿನ ಉಲ್ಲಂಘನೆಯಾಗಿದೆ. ಈ ಬಾರಿ, ಸರಕಾರ ಬಜೆಟ್ ಸಾಮಾಜಿಕ ಕ್ಷೇತ್ರಗಳಿಗೆ ಅನುದಾನವನ್ನು ಭಾರೀ ಪ್ರಮಾಣದಲ್ಲಿ ಇಳಿಸಿದೆ. ಮಕ್ಕಳು ಮತ್ತು ಮಹಿಳೆಯರ ಆರೋಗ್ಯದ ಮೇಲೆ ಇದು ಭಾರೀ ಪ್ರಮಾಣದಲ್ಲಿ ಪರಿಣಾಮ ಬೀರಲಿದೆ ಎನ್ನುವುದನ್ನು ಸ್ವತಃ ಕೇಂದ್ರ ಸಚಿವರೇ ಆತಂಕ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಶೈಕ್ಷಣಿಕ ಕ್ಷೇತ್ರದ ಅನುದಾನಗಳೂ ಇಳಿಕೆಯಾಗಿವೆ. ಮಾತು ಮಾತಿಗೆ ‘ಮೇಕ್ ಇನ್ ಇಂಡಿಯಾ’ ಎನ್ನುತ್ತಿರುವ ಸರಕಾರ, ಕಾರ್ಪೊರೇಟ್ ಹಿತಾಸಕ್ತಿಗಳನ್ನಷ್ಟೇ ನೋಡುತ್ತಿದೆಯೇ ಹೊರತು, ಸರಕಾರವೆನ್ನುವುದು ಜನರ ಸೇವೆಗಿರುವ ವ್ಯವಸ್ಥೆ ಎನ್ನುವುದನ್ನು ಸಂಪೂರ್ಣ ಮರೆತಿದೆ. ಇದೀಗ ಅದರ ಭಾಗವಾಗಿಯೇ ಔಷಧಗಳ ಮೇಲೆ ಇನ್ನಷ್ಟು ಹೊರೆ ಬಿದ್ದಿದೆ.
ಕ್ಯಾನ್ಸರ್ ರೋಗಿಗಳು ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದಾರೆ. ಆದರೆ ಅದಕ್ಕೆ ಅಗತ್ಯವಿರುವಷ್ಟು ವೈದ್ಯರೇ ದೇಶದಲ್ಲಿಲ್ಲ. ಎರಡು ಸಾವಿರ ರೋಗಿಗಳಿಗೆ ಒಬ್ಬ ವೈದ್ಯ ಸೇವೆ ಸಲ್ಲಿಸುವಂತಹ ವಾತಾವರಣ ಈ ದೇಶದಲ್ಲಿದೆ. ಈ ವೈದ್ಯ ಬಡವರಿಗೆ ಎಟಕುವುದು ದುಸ್ಸಾಧ್ಯ. ಇಂತಹ ಹೊತ್ತಿನಲ್ಲಿ ಕ್ಯಾನ್ಸರ್‌ನಂತಹ ಮಾರಕ ರೋಗಗಳ ಔಷಧಗಳೂ ದುಬಾರಿಯಾದರೆ, ಜನರು ಏನು ಮಾಡಬೇಕು? ಕ್ಯಾನ್ಸರ್, ಎಚ್‌ಐವಿ ಸೇರಿದಂತೆ ಹಲವು ಮಾರಕ ರೋಗಗಳಿಗೆ ಸ್ವದೇಶಿ ಔಷಧ ಇದೆ ಎಂದಾದರೆ ಸರಕಾರದ ನಿಲುವನ್ನು ಸ್ವಾಗತಿಸಬಹುದಾಗಿದೆ. ಇಂದಿಗೂ ಭಾರತದಲ್ಲಿ ಹಲವು ಔಷಧಗಳು ಅಲಭ್ಯ. ಮತ್ತು ಅದಕ್ಕಾಗಿ ವಿದೇಶಿ ಕಂಪೆನಿಗಳನ್ನೇ ನೆಚ್ಚಿಕೊಳ್ಳಬೇಕಾದ ಸ್ಥಿತಿಯಿದೆ. ಹೀಗಿರುವಾಗ, ‘ಮೇಕ್ ಇನ್ ಇಂಡಿಯಾ’ದ ಮೂಲಕ ಭಾರತದಲ್ಲೇ ಎಲ್ಲ ಔಷಧಗಳನ್ನು ತಯಾರಿಸಿ ಮಾರಾಟ ಮಾಡುವಂತಹ ತಕ್ಷಣದ ವಾತಾವರಣ ಇದೆಯೇ? ವಿಪರ್ಯಾಸವೆಂದರೆ, ಇಂದು ಸ್ವದೇಶಿ ಔಷಧಗಳ ಹೆಸರಿನಲ್ಲಿ ಬಾಬಾ ರಾಮ್‌ದೇವ್‌ನಂತಹ ಕಪಟ ವೈದ್ಯರು ಆರೋಗ್ಯ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಇಂದು ಅವರ ಪತಂಜಲಿಯು ಗಂಡು ಮಗು ಹುಟ್ಟುವುದಕ್ಕೂ ನನ್ನಲ್ಲಿ ಔಷಧ ಇದೆ ಎಂದು ಹೇಳುತ್ತದೆ. ಸಲಿಂಗ ಕಾಮವನ್ನು ಔಷಧ ನನ್ನ ಬಳಿ ಇದೆ ಎಂದು ರಾಮ್‌ದೇವ್ ಹೇಳಿಕೊಳ್ಳುತ್ತಾರೆ. ಏಕಾಏಕಿ ಔಷಧಗಳ ದರ ಏರಿರುವುದರಿಂದ ಅದರ ಲಾಭವನ್ನು ರಾಮ್‌ದೇವ್‌ನಂತಹ ಕಪಟ ವೈದ್ಯರು ತಮ್ಮದಾಗಿಸಿಕೊಳ್ಳುತ್ತಾರೆ. ಜನರು ದಾರಿ ಕಾಣದೆ, ಪತಂಜಲಿಯಂತಹ ಕಂಪೆನಿಗಳು ತಯಾರಿಸಿದ ಔಷಧಗಳಿಗೆ ಮೊರೆ ಹೋಗಬೇಕಾಗುತ್ತದೆ. ಆಯುರ್ವೇದದ ಕುರಿತಂತೆ ನೂರಾರು ಅನುಮಾನಗಳಿವೆ. ಗೊಂದಲಗಳಿವೆ. ಆದರೆ ಕೆಲವು ಆಯುರ್ವೇದ ಔಷಧ ತಯಾರಕರು ತಮ್ಮಲ್ಲಿ ಕ್ಯಾನ್ಸರ್, ಏಡ್ಸ್‌ಗೆ ಔಷಧ ಇದೆ ಎಂದೂ ಹೇಳಿಕೊಳ್ಳುತ್ತಾರೆ. ಆದರೆ ಅದರಿಂದ ಜನರಿಗೆ ಲಾಭವಾದದ್ದು ತೀರಾ ಕಡಿಮೆ. ಒಟ್ಟಿನಲ್ಲಿ, ಮುಂದಿನ ದಿನಗಳಲ್ಲಿ ಔಷಧದ ಹೆಸರಲ್ಲಿ ರಾಮ್‌ದೇವ್‌ನಂತಹ ಬಾಬಾಗಳು ತಮ್ಮ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವುದಕ್ಕೆ ಸರಕಾರ ನಿರ್ಧಾರ ದಾರಿ ಮಾಡಿಕೊಟ್ಟಿದೆ.
ಜೆನರಿಕ್ ಔಷಧಗಳ ಬಗ್ಗೆ ಸರಕಾರ ಮಾತನಾಡುತ್ತಾ ಬಂದಿದೆಯೇ ಹೊರತು, ಈವರೆಗೆ ಜೆನರಿಕ್ ಔಷಧವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವಲ್ಲಿ ಸರಕಾರ ವಿಫಲವಾಗಿದೆ. ಕನಿಷ್ಠ ಈ ನಿಟ್ಟಿನಲ್ಲಾದರೂ ಸರಕಾರ ಯೋಜನೆಗಳನ್ನು ರೂಪಿಸಬೇಕು. ಇದೇ ಸಂದರ್ಭದಲ್ಲಿ, ಸರಕಾರಿ ಆಸ್ಪತ್ರೆಗಳು ಒಂದೊಂದಾಗಿ ಖಾಸಗಿಯವರ ತೆಕ್ಕೆಗೆ ಜಾರುತ್ತಿವೆ. ಒಂದೆಡೆ ಔಷಧ ದುಬಾರಿಯಾಗಿ, ಮಗದೊಂದೆಡೆ ಸರಕಾರಿ ಆಸ್ಪತ್ರೆಗಳ ಮೇಲೆ ಖಾಸಗಿ ಜನರು ನಿಯಂತ್ರಣ ಸಾಧಿಸಿದರೆ, ಜನರ ಬದುಕು ಮತ್ತಷ್ಟು ದುರ್ಬರವಾಗಲಿದೆ. ‘ಅಚ್ಛೇದಿನ್’ ಬರುತ್ತದೆ ಎಂದು ಕಾಯುತ್ತಿರುವ ಜನರಿಗೆ ಸರಕಾರ, ಬರ್ಬರ ದಿನಗಳನ್ನು ಕೊಡುಗೆಯಾಗಿ ಕೊಡುವ ಎಲ್ಲ ಸೂಚನೆಗಳು ಕಾಣಿಸಿಕೊಳ್ಳುತ್ತಿವೆ.