ಮುಕ್ತ ಇಂಟರ್‌ನೆಟ್‌ಗೆ ಜೈ ಎಂದ ಟ್ರಾಯ್ : ಫೇಸ್‌ಬುಕ್, ಏರ್‌ಟೆಲ್ ಯೋಜನೆಗಳಿಗೆ ಹಿನ್ನಡೆ
ವಿವಿಧ ಅಂತರ್‌ಜಾಲ ಸೇವೆಗಳಿಗೆ ವಿಭಿನ್ನದರ ನಿಷೇಧ
ಹೊಸದಿಲ್ಲಿ,ಫೆ.8: ಅಂತರ್ಜಾಲ ಸೇವೆಗೆ ವಿಭಿನ್ನ ದರವನ್ನು ನಿಗದಿಪಡಿಸುವುದನ್ನು ಭಾರತೀಯ ಟೆಲಿಕಾಂ ಪ್ರಾಧಿಕಾರ (ಟ್ರಾಯ್) ಸೋಮವಾರ ನಿಷೇಧಿಸಿದೆ. ಇದರಿಂದಾಗಿ ಗ್ರಾಹಕರಿಗೆ ವಿಭಿನ್ನದರದಲ್ಲಿ ಇಂಟರ್‌ನೆಟ್ ಸೇವೆ ಒದಗಿಸುವ ಫೇಸ್‌ಬುಕ್ ಮತ್ತಿತರ ಸೇವಾಪೂರೈಕೆದಾರರ ಯೋಜನೆಗೆ ಹಿನ್ನಡೆಯುಂಟಾಗಿದೆ. ಒಂದು ವೇಳೆ ಈ ಆದೇಶದ ಉಲ್ಲಂಘನೆಯಾದಲ್ಲಿ, ಇಂಟರ್‌ನೆಟ್ ಸೇವಾಪೂರೈಕೆದಾರರು, ಪ್ರತಿ ದಿನಕ್ಕೆ 50 ಸಾವಿರ ರೂ. ದಂಡ ಪಾವತಿಸಬೇಕಾದಿತೆಂದು ಟ್ರಾಯ್ ಎಚ್ಚರಿಕೆ ನೀಡಿದೆ. ಗರಿಷ್ಠ 50 ಲಕ್ಷ ರೂ.ವರೆಗೂ ದಂಡವಿಧಿಸಬಹುದಾಗಿದೆಯೆಂದು ಅದು ಹೇಳಿದೆ.
ವಿಷಯದ ಆಧಾರದಲ್ಲಿ ಯಾವುದೇ ಸೇವಾಪೂರೈಕೆದಾರನು ಇಂಟರ್‌ನೆಟ್ ಸೇವೆಗಳಿಗೆ ವಿಭಿನ್ನ ದರ ವ್ಯತ್ಯಾಸವನ್ನು ನಿಗದಿಪಡಿಸಕೂಡದು ಎಂದು ಟ್ರಾಯ್ ಅಧ್ಯಕ್ಷ ಆರ್.ಎಸ್.ಶರ್ಮಾ ತಿಳಿಸಿದ್ದಾರೆ. ಹೊಸದಿಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ‘ ವಿಭಿನ್ನ ದರ ವ್ಯತ್ಯಾಸದ ಇಂಟರ್‌ನೆಟ್ ಡಾಟಾ ಸೇವೆಗಳ ನಿಷೇಧ-2016’ ಎಂಬ ಶಿರೋನಾಮೆಯ, ಮುಕ್ತ ಅಂತರ್ಜಾಲ ವ್ಯವಸ್ಥೆ (ನೆಟ್‌ನ್ಯೂಟ್ರಾಲಿಟಿ)ಯ ಕುರಿತಾದ ನೂತನ ನಿಯಮಾವಳಿಗಳು, ಇಂದಿನಿಂದಲೇ ಜಾರಿಗೆ ಬರಲಿವೆಯೆಂದು ತಿಳಿಸಿದ್ದಾರೆ.
ಟ್ರಾಯ್ ಜಾರಿಗೊಳಿಸಿರುವ ಈ ನೂತನ ನಿಯಮಾವಳಿಗಳಿಂದಾಗಿ, ಗ್ರಾಹಕರಿಗೆ ‘ಫ್ರೀಬೇಸಿಕ್ಸ್’ ಯೋಜನೆಯಡಿ ಉಚಿತ ಇಂಟರ್‌ನೆಟ್ ಸೇವೆ ಒದಗಿಸುವ ಫೇಸ್‌ಬುಕ್‌ನ ಯೋಜನೆಗೆ ಹಿನ್ನಡೆಯುಂಟಾಗಿದೆ.ಇಂಟರ್‌ನೆಟ್ ಸೇವೆಗೆ ವಿಭಿನ್ನದರ ನಿಗದಿಪಡಿಸುವ ಯೋಜನೆಗಳನ್ನು ಪ್ರಕಟಿಸಿದ ಏರ್‌ಟೆಲ್ ಮತ್ತಿತರ ಸೇವಾಪೂರೈಕೆದಾರರಿಗೂ ಮುಖಭಂಗವಾಗಿದೆ.
ಇಂಟರ್‌ನೆಟ್‌ನಲ್ಲಿರುವ ಯಾವ ವಿಷಯಕ್ಕೂ ವಿಭಿನ್ನದರವನ್ನು ನಿಗದಿಪಡಿಸಲು ಸಾಧ್ಯವಿಲ್ಲವೆಂಬ ವಿಸ್ತೃತಅಂಶವನ್ನು ಈ ನಿಯಮಾವಳಿಯಲ್ಲಿ ಒತ್ತಿಹೇಳಿರುವುದಾಗಿ ಶರ್ಮಾ ಹೇಳಿದ್ದಾರೆ. ಆದಾಗ್ಯೂ ತುರ್ತು ಇಂಟರ್‌ನೆಟ್ ಸೇವೆಗಳನ್ನು ಒದಗಿಸುವ ಸಂದರ್ಭದಲ್ಲಿ ತಮ್ಮ ದರದಲ್ಲಿ ವ್ಯತ್ಯಾಸ ಮಾಡಲು, ಸೇವಾಪೂರೈಕೆದಾರ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ. ಆದರೆ ತುರ್ತುಸೇವೆಗಳನ್ನು ನೀಡುವ ಬಗ್ಗೆ ಸೇವಾಪೂರೈಕೆದಾರರು ಏಳು ದಿನಗಳೊಳಗೆ ಟ್ರಾಯ್‌ಗೆ ಮಾಹಿತಿ ನೀಡಬೇಕಾಗುತ್ತದೆಯೆಂದು ಅವರು ತಿಳಿಸಿದರು.
ಹಾಡು, ಸಿನೆಮಾಗಳ ಅಪ್ಲಿಕೇಶನ್‌ಗಳನ್ನು ಕಡಿಮೆದರದಲ್ಲಿ ಟೆಲಿಕಾಂ ಅಪರೇಟರ್‌ಗಳು ಒದಗಿಸುತ್ತಿರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ‘‘ನಿರ್ದಿಷ್ಡ ಉತ್ಪನ್ನ ಅಥವಾ ಸೇವೆಗಳ ಬಗ್ಗೆ ನಾವಿಲ್ಲಿ ಮಾತನಾಡುತ್ತಿಲ್ಲ. ಇಂಟರ್‌ನೆಟ್‌ನಲ್ಲಿ ಲಭ್ಯವಿರುವ ಯಾವುದೇ ಸೇವೆಗೆ ಮನಬಂದಂತೆ ದರ ವಿಧಿಸ ಕೂಡದು’’ ಎಂದು ಟ್ರಾಯ್ ಅಧ್ಯಕ್ಷರು ತಿಳಿಸಿದ್ಜರು.
ಆದರೆ ಈ ನಿಯಾಮವಳಿಯನ್ನು ಎರಡು ವರ್ಷಗಳ ಆನಂತರ ಅಥವಾ ಅದಕ್ಕೂ ಮುನ್ನ, ಯೋಗ್ಯವೆಂದು ಕಂಡುಬಂದ ಸಂದರ್ಭದಲ್ಲಿ ಪರಾಮರ್ಶಿಸಲಾಗುವುದೆಂದು ಶರ್ಮಾ ಹೇಳಿದರು.
2ಜಿ,3ಜಿ ಹಾಗೂ 4ಜಿ ಸೇವೆಗಳಿಗೆ ವೇಗದ ಆಧಾರದಲ್ಲಿ ವಿಭಿನ್ನದರವನ್ನು ವಿಧಿಸುತ್ತಿರುವುದನ್ನು ಪ್ರಸ್ತಾಪಿಸಿದ ಅವರು,ಬ್ರಾಡ್‌ಬಾಂಡ್ ಸೇವೆಗಳನ್ನು ಒದಗಿಸುವ ಬಗ್ಗೆ ಸೇವಾಪೂರೈಕೆದಾರರೊಂದಿಗೆ ಪಾರದರ್ಶಕವಾದ ರೀತಿಯಲ್ಲಿ ಚರ್ಚಿಸುವುದಾಗಿ ತಿಳಿಸಿದರು.
‘‘ ಇಂಟರ್‌ನೆಟ್ ಸೇವೆಗೆ ವಿಭಿನ್ನದರವನ್ನು ವಿಧಿಸುವುದನ್ನು ನಿಷೇಧಿಸುವ ಟ್ರಾಯ್ ಕಾಯಿದೆಯು, ಸರಿಯಾದ ದಿಕ್ಕಿನೆಡೆಗೆ ಇಟ್ಟಿರುವ ಹೆಜ್ಜೆಯಾಗಿದೆ. ಮುಕ್ತ ಅಂತರ್ಜಾಲ (ನೆಟ್ ನ್ಯೂಟ್ರಾಲಿಟಿ)ದ ತತ್ವಕ್ಕೆ ಶಾಸನಾತ್ಮಕ ಗೌರವವನ್ನು ನೀಡಿದ ಕೆಲವೇ ರಾಷ್ಟ್ರಗಳ ಸಾಲಿನಲ್ಲಿ ಭಾರತವು ಸ್ಥಾನವನ್ನು ಪಡೆದುಕೊಳ್ಳಲಿದೆ".
ಮಿಶಿ ಚೌಧುರಿ
ಸಾಫ್ಟ್‌ವೇರ್ ಫ್ರೀಡಂ ಲಾ ಸೆಂಟರ್‌ನ ಕಾರ್ಯಕಾರಿ ನಿರ್ದೇಶಕ
ನೆಟ್‌ನ್ಯೂಟ್ರಾಲಿಟಿ
2014ರ ಡಿಸೆಂಬರ್‌ನಲ್ಲಿ ಇಂಟರ್‌ನೆಟ್ ಆಧಾರಿತ ಕರೆಗಳಿಗೆ ಪ್ರತ್ಯೇಕ ದರಗಳನ್ನು ವಿಧಿಸಲು ಏರ್‌ಟೆಲ್ ನಿರ್ಧರಿಸಿದಾಗ, ದೇಶಾದ್ಯಂತ ಮುಕ್ತಅಂತರ್ಜಾಲ (ನೆಟ್‌ನ್ಯೂಟ್ರಾಲಿಟಿ) ವ್ಯವಸ್ಥೆ ಬಗ್ಗೆ ಚರ್ಚೆ ಭುಗಿಲೆದ್ದಿತು. ಜನತೆಯ ಪ್ರಬಲ ಪ್ರತಿಭಟನೆಯ ಹಿನ್ನೆಲೆಯಲ್ಲಿ ಏರ್‌ಟೆಲ್ ತನ್ನ ನಿರ್ಧಾರದಿಂದ ಹಿಂದೆ ಸರಿಯಿತು. ಆನಂತರ ಏರ್‌ಟೆಲ್, ಉಚಿತವಾಗಿ ಇಂಟರ್‌ನೆಟ್ ಸೇವೆಯನ್ನು ಒದಗಿಸುವ ‘ಏರ್‌ಟೆಲ್ ಝೀರೋ’ ಯೋಜನೆಯನ್ನು ಪ್ರಕಟಿಸಿದ ಬಳಿಕ ಹಾಗೂ ಆನಂತರ ಫೇಸ್‌ಬುಕ್ ಫ್ರೀಬೇಸಿಕ್ಸ್ ಯೋಜನೆಯನ್ನು ಪ್ರಕಟಿಸಿದಾಗಲೂ, ಚರ್ಚೆಯು ತೀವ್ರ ಸ್ವರೂಪವನ್ನು ಪಡೆಯಿತು.
ಕೆಲವು ವೆಬ್‌ಸೈಟ್ ಹಾಗೂ ಆಪ್ಲಿಕೇಶನ್‌ಗಳನ್ನು ಉಚಿತವಾಗಿ ನೀಡಿದರೆ,ನೆಟ್ ನ್ಯೂಟ್ರಾಲಿಟಿಯ ಮೂಲತತ್ವಗಳನ್ನು ಉಲ್ಲಂಘಿಸಿದಂತಾಗುತ್ತದೆ.ಇಂಟರ್‌ನೆಟ್‌ನಲ್ಲಿ ಎಲ್ಲಾ ವೆಬ್‌ಸೈಟ್ ಹಾಗೂ ಡಾಟಾ ಸೇವೆಗಳನ್ನು ಸಮಾನವಾಗಿ ಪರಿಗಣಿಸಬೇಕೆಂದು ಟ್ರಾಯ್ ಪ್ರತಿಪಾದಿಸಿದೆ.