ಮ್ಯಾಂಚೆಸ್ಟರ್ ಟೆಸ್ಟ್ ಫಿಕ್ಸಿಂಗ್ ಆರೋಪ: ಸುನೀಲ್ ದೇವ್ ನಿರಾಕರಣೆ
ಹೊಸದಿಲ್ಲಿ, ಫೆ.8: ಎರಡು ವರ್ಷಗಳ ಹಿಂದೆ ಮಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ನಾಲ್ಕನೆ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಫಿಕ್ಸಿಂಗ್ ನಡೆಸಿರುವುದಾಗಿ ತಾನು ನೀಡಿರುವ ಹೇಳಿಕೆಯನ್ನು ಭಾರತ ಕ್ರಿಕೆಟ್ ತಂಡದ ಮಾಜಿ ಮ್ಯಾನೇಜರ್ ಸುನೀಲ್ ದೇವ್ ನಿರಾಕರಿಸಿದ್ದಾರೆ.
2014ರಲ್ಲಿ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ನಾಲ್ಕನೆ ಟೆಸ್ಟ್ ಫಿಕ್ಸ್ ಆಗಿತ್ತು. ಮಳೆಯಿಂದಾಗಿ ಪಿಚ್ ಒದ್ದೆಯಾಗಿದ್ದ ಹಿನ್ನೆಲೆಯಲ್ಲಿ ಟಾಸ್ ಗೆದ್ದರೆ ಫಿಲ್ಡಿಂಗ್ ಆಯ್ದುಕೊಳ್ಳುವ ನಾವು ನಿರ್ಧಾರ ಮಾಡಿದ್ದೆವು. ಆದರೆ ಧೋನಿ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡರು. ಅವರ ನಿರ್ಧಾರ ಅಚ್ಚರಿಯನ್ನುಂಟು ಮಾಡಿತ್ತು. ್ತ ಎಂದು ಸುನೀಲ್ ದೇವ್ ದಿಲ್ಲಿಯ ಹಿಂದಿ ದಿನಪತ್ರಿಕೆ ನಡೆಸಿದ ಕುಟುಕು ಕಾರ್ಯಾಚರಣೆಯ ಹೇಳಿರುವುದಾಗಿ ವರದಿಯಾಗಿತ್ತು.
ಧೋನಿ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವ ಮೂಲಕ ಪಂದ್ಯ ಫಿಕ್ಸ್ ಮಾಡಿರುವುದು ಶೇ 100ರಷ್ಟು ಖಚಿತ ಎಂದು ಸುನೀಲ್ ದೇವ್ ನೀಡಿದರೆನ್ನಲಾದ ಹೇಳಿಕೆಯ ವೀಡಿಯೊ ದಾಖಲೆಯನ್ನು ದಿಲ್ಲಿಯ ಹಿಂದಿ ದಿನಪತ್ರಿಕೆ ‘ಸನ್ ಸ್ಟಾರ್’ ದಿಲ್ಲಿಯ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ರವಿವಾರ ಬಿಡುಗಡೆ ಮಾಡಿತ್ತು.
ಈ ವಿಚಾರವನ್ನು ಬಿಸಿಸಿಐ ಗಮನಕ್ಕೆ ತಂದಿದ್ದೆ. ಬಿಸಿಸಿಐನ ಮಾಜಿ ಅಧ್ಯಕ್ಷ ಎನ್ .ಶ್ರೀನಿವಾಸನ್ ಮುಂದೆಯೇ ಟೈಪ್ ಮಾಡಿ ಈ ಬಗ್ಗೆ ಬಿಸಿಸಿಐಗೆ ದೂರು ನೀಡಿದ್ದೆ. ಎನ್.ಶ್ರೀನಿವಾಸನ್ ಈ ವರದಿಯನ್ನು ಬಹಿರಂಗಪಡಿಸಲು ಬಯಸಲಿಲ್ಲ. ಬಿಸಿಸಿಐ ಈ ಪತ್ರದ ವಿಚಾರದಲ್ಲಿ ಯಾವುದೇ ಕ್ರಮಕೈಗೊಳ್ಳಲಿಲ್ಲ’’ ಎಂದು ದೇವ್ ಆರೋಪಿಸಿರುವುದಾಗಿ ಹೇಳಲಾಗಿತ್ತು.
ಈ ಹೇಳಿಕೆಗಳನ್ನು ಅಲ್ಲಗೆಳೆದಿರುವ ಸುನೀಲ್ ದೇವ್ ಅವರು ಹಿಂದಿ ಪತ್ರಿಕೆಯ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲು ಚಿಂತನೆ ನಡೆಸಿರುವುದಾಗಿ ಮಾಹಿತಿ ನೀಡಿದ್ದಾರೆ.