×
Ad

ಹಿಮರಾಶಿಯಲ್ಲಿ ಹೂತಿದ್ದ ಕನ್ನಡಿಗ ಸೈನಿಕ ಜೀವಂತ!

Update: 2016-02-09 08:19 IST

ನವದೆಹಲಿ: ಕಳೆದ ಬುಧವಾರ ಸಿಯಾಚಿನ್ ಪ್ರದೇಶದ ಸೋನಮ್ ಪೋಸ್ಟ್‌ನಲ್ಲಿ ಸಂಭವಿಸಿದ ಮಹಾ ಹಿಮಪಾತದಿಂದ ಹಿಮದ ರಾಶಿಯಲ್ಲಿ ಹೂತುಹೋಗಿದ್ದ ಹತ್ತು ಮಂದಿ ಭಾರತೀಯ ಸೈನಿಕರ ಪೈಕಿ ಒಬ್ಬ ಜೀವಂತವಾಗಿ ಬದುಕಿ ಉಳಿದಿದ್ದಾನೆ. 19600 ಅಡಿ ಎತ್ತರದಲ್ಲಿ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಸೈನಿಕನನ್ನು ಪತ್ತೆ ಮಾಡಲಾಗಿದೆ.


ಧಾರವಾಡ ಜಿಲ್ಲೆ ಬೆಟ್ಟದೂರಿನ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಜೀವಂತ ಇರುವುದು ಕಾರ್ಯಾಚರಣೆ ವೇಳೆ ಪತ್ತೆಯಾಯಿತು. ಉಳಿದ ಯಾವ ಸೈನಿಕರೂ ನಮ್ಮೊಂದಿಗೆ ಇಲ್ಲ ಎಂದು ಉತ್ತರ ಸೇನಾ ಕಮಾಂಡ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಡಿ.ಎಸ್.ಹೂಡಾ ಪ್ರಕಟಿಸಿದ್ದಾರೆ.


ಆತನ ಆರೋಗ್ಯಸ್ಥಿತಿ ಗಂಭೀರವಾಗಿದ್ದರೂ, ಆತನನ್ನು ಉಳಿಸಿಕೊಳ್ಳುವ ಸಲುವಾಗಿ ನವದೆಹಲಿಯಲ್ಲಿರುವ ಸೇನಾ ಸಂಶೋಧನಾ ಹಾಗೂ ಚಿಕಿತ್ಸಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪವಾಡಸದೃಶವಾಗಿ ಆತ ಉಳಿಯುತ್ತಾರೆ ಎಂಬ ನಿರೀಕ್ಷೆ ನಮ್ಮದು ಎಂದು ಹೇಳಿದ್ದಾರೆ.


ಅರೆಪ್ರಜ್ಞಾವಸ್ಥೆಯಲ್ಲಿದ್ದ ಈ ಸೈನಿಕನನ್ನು 25 ಅಡಿ ಹಿಮದಡಿ ಪತ್ತೆ ಮಾಡಿ, ಬಿಸಿ ಡೇರೆಗೆ ಸ್ಥಳಾಂತರಿಸಲಾಯಿತು. ವೈದ್ಯರ ಸಹಾಯದಿಂದ ಪ್ರಥಮ ಚಿಕಿತ್ಸೆ ನೀಡಿ, ಹಿಮ ಪ್ರದೇಶದಿಂದ ಹೊರಕ್ಕೆ ಕರೆದೊಯ್ಯಲಾಗಿದೆ. ಹತ್ತು ಸೈನಿಕರ ಪೈಕಿ ಯಾರೂ ಬದುಕಿ ಉಳಿದಿರುವ ನಿರೀಕ್ಷೆಯನ್ನು ಸೇನೆ ಕೈಬಿಟ್ಟಿತ್ತು. 800 ಮೀಟರ್ ಎತ್ತರದ ಹಿಮಪರ್ವತ ಕುಸಿದು ಹಲವಾರು ಟನ್ ಮಂಜುಗಡ್ಡೆಯ ಅಡಿಯಲ್ಲಿ ಇವರು ಸಿಕ್ಕಿ ಹಾಕಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News