×
Ad

5 ವರ್ಷದಲ್ಲಿ ಭಾರತದ 13000 ಉತ್ಪನ್ನ ತಿರಸ್ಕರಿಸಿದ ಅಮೆರಿಕ

Update: 2016-02-09 08:22 IST

ಬೆಂಗಳೂರು: ಅಮೆರಿಇಕದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ (ಎಫ್‌ಡಿಎ) 2010 ರಿಂದ 2015ರ ಅವಧಿಯಲ್ಲಿ ಭಾರತದಲ್ಲಿ ಉತ್ಪಾದನೆಯಾದ 13334 ವಸ್ತುಗಳನ್ನು ತಿರಸ್ಕರಿಸಿದೆ. ಈ ಅವಧಿಯಲ್ಲಿ ಚೀನಾದಲ್ಲಿ ಉತ್ಪಾದನೆಯಾದ 15,087 ವಸ್ತುಗಳನ್ನೂ ತಿರಸ್ಕರಿಸಿರುವುದು ಅಂಕಿ ಅಂಶಗಳಿಂದ ತಿಳಿದುಬರುತ್ತಿದೆ.


ಕೈಗಾರಿಕಾ ಹಾಗೂ ವಾಣಿಜ್ಯ ಸಚಿವಾಲಯದ ಮಾಹಿತಿ ಪ್ರಕಾರ, ತಿರಸ್ಕೃತ ಉತ್ಪನ್ನಗಳಲ್ಲಿ ಪೇಟೆಂಟ್ ಪಡೆದ ಔಷಧಿಗಳು, ಜೀವರಕ್ಷಕ ಔಷಧಿಗಳು, ತಿಂಡಿ ತಿನಸು, ಬೇಕರಿ ಉತ್ಪನ್ನಗಳು, ಸಾಂಬಾರ, ಸ್ನಾನದ ಸಾಬೂನು ಮತ್ತು ಡಿಟರ್ಜೆಂಟ್‌ಗಳು ಸೇರಿವೆ. ಇದಕ್ಕೆ ನೀಡಿರುವ ಕಾರಣಗಳೆಂದರೆ ಪ್ಯಾಕೇಜಿಂಗ್ ಸಮರ್ಪಕವಾಗಿಲ್ಲ; ಬ್ರಾಂಡಿಂಗ್ ಸರಿ ಇಲ್ಲ; ಕಲಬೆರಕೆ, ಅಧಿಕ ಉಳಿಕೆ ಮಟ್ಟ ಹಾಗೂ ಲೇಬಲಿಂಗ್ ಸಮರ್ಪಕವಾಗಿಲ್ಲದಿರುವುದು.


2016ರ ಜನವರಿಯಲ್ಲಿ ಭಾರತದ 228 ಹಾಗೂ ಚೀನಾದ 314 ಉತ್ಪನ್ನಗಳು ತಿರಸ್ಕೃತವಾಗಿವೆ. ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿದ್ದರೆ, ಮತ್ತೊಂದು ವರ್ಷ ಭಾರತದ ವಸ್ತುಗಳು ಭಾರಿ ಪ್ರಮಾಣದಲ್ಲಿ ಅಮೆರಿಕದಿಂದ ತಿರಸ್ಕೃತವಾಗುವ ಸಾಧ್ಯತೆ ದಟ್ಟವಾಗಿದೆ. ಜನವರಿ 5ರಂದು ಇಂಟಾಸ್ ಫಾರ್ಮಸೂಟಿಕಲ್ ಹಾಗೂ ಸನೋಫಿ ಇಂಡಿಯಾ ಸಂಸ್ಥೆಯ ಮೂರು ಔಷಧಿಗಳನ್ನು ತಿರಸ್ಕರಿಸಲಾಗಿದೆ. ಇದು ಅಮೆರಿಕದ ನಿಯಂತ್ರಣ ನಿಯಮಾವಳಿಯ 505 ಎ, 801 ಎ-3 ವಿಧಿಗಳಿಗೆ ಅನುಗುಣವಾಗಿಲ್ಲ ಎಂದು ಕಾರಣ ನೀಡಲಾಗಿದೆ.


ಈ ಬಗ್ಗೆ ಬಯೋಕಾನ್ ಸಿಎಂಡಿ ಕಿರಣ್ ಮಜೂಂದಾರ್ ಅವರ ಪ್ರತಿಕ್ರಿಯೆ ಕೇಳಿದಾಗ, ನಿರ್ದಿಷ್ಟ ಪ್ರಕರಣಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಿಲ್ಲ. ಆದರೆ ಮಾಹಿತಿ ಸಮಗ್ರತೆಯಿಂದ ಹಿಡಿದು, ನೈರ್ಮಲ್ಯದ ವರೆಗೆ ಹಲವು ಸಮಸ್ಯೆಗಳಿವೆ. ನಮ್ಮ ಘಟಕಗಳಿಗೆ ನೀಡಿರುವ ಎಚ್ಚರಿಕೆ ಪತ್ರಗಳನ್ನೇ ಗಮನಿಸಿ, ನಿರ್ದಿಷ್ಟ ಕಂಪನಿಯ ಹೆಸರು ಹೇಳಬಯಸುವುದಿಲ್ಲ. ಬೇಕಾಬಿಟ್ಟಿಯಾಗಿ ಉತ್ಪಾದಿಸುವ ಘಟಕಗಳು ಹಲವು ಇವೆ ಎಂದು ಸ್ಪಷ್ಟಪಡಿಸಿದರು.


ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ ಸಿಇಓ ಅಜಯ್ ಸಹಾಯ್ ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ, ವಿವಿಧ ಕಾರಣಗಳಿಂದ ಕಳೆದ ವರ್ಷವರೆಗೂ ನಮ್ಮ ಕಂಪನಿಗಳು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರಲಿಲ್ಲ. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸಬೇಕಿದ್ದರೆ, ಗುಣಮಟ್ಟಕ್ಕೆ ಗಮನ ಹರಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಸಮರೋಪಾದಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News