2ನೇ ದಿನವೂ ಹೆಡ್ಲಿ ವಿಡಿಯೊ ಕಾನ್ಫರೆನ್ಸ್ ವಿಚಾರಣೆ
ಮುಂಬೈ: 2008ರ ನವೆಂಬರ್ 26ರ ಮುಂಬೈ ದಾಳಿಯ ಆರೋಪಿ ಡೇವಿಡ್ ಕೋಲ್‌ಮನ್ ಹೆಡ್ಲಿಯನ್ನು ಎರಡನೇ ದಿನವಾದ ಮಂಗಳವಾರ ಕೂಡಾ ಮುಂಬೈ ವಿಚಾರಣಾ ನ್ಯಾಯಾಲಯ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುತ್ತಿದೆ. ಮಂಗಳವಾರ ಮುಂಜಾನೆ 7ಕ್ಕೆ ವಿಚಾರಣೆ ಆರಂಭವಾಗಿದೆ.
ಸೋಮವಾರ ಮುಂಜಾನೆ ಆರಂಭವಾದ ವಿಚಾರಣೆ ಏಳು ಗಂಟೆ ಕಾಲ ನಡೆದಿದ್ದು, ಮುಂಬೈ ದಾಳಿಯ ಬಗೆಗಿನ ಹಲವು ಅಂಶಗಳನ್ನು ಹೆಡ್ಲಿ ಬಹಿರಂಗಪಡಿಸಿದ್ದಾನೆ. 2008ರ ಮೊದಲ ಸಂಚು, ಉಗ್ರರು ಪ್ರಯಾಣಿಸುತ್ತಿದ್ದ ನೌಕೆ ಸಮುದ್ರದಲ್ಲಿ ಬಂಡೆಗೆ ಅಪ್ಪಳಿಸಿದ್ದರಿಂದ ವಿಫಲವಾಯಿತು ಎಂದು ವಿವರಿಸಿದ್ದಾನೆ. ಎಲ್ಲರೂ ಜೀವರಕ್ಷಕ ಕವಚ ಧರಿಸಿದ್ದರಿಂದ ಎಲ್ಲರೂ ಸುರಕ್ಷಿತವಾಗಿ ಪಾರಾದರು. ಆದರೆ ಸ್ಫೋಟಕಗಳು ಹಾಗೂ ಶಸ್ತ್ರಾಸ್ತ್ರಗಳು ನಷ್ಟವಾದವು ಎಂದು ವಿವರ ನೀಡಿದ್ದಾನೆ.
ಮೊದಲು ಎರಡು ಬಾರಿ ವಿಫಲಯತ್ನ ನಡೆಸಿದ ಹತ್ತು ಮಂದಿಯೇ ನವೆಂಬರ್ ದಾಳಿಗೂ ಬಂದಿದ್ದೆವು. ಭಾರತಕ್ಕೆ ಬರುವಾಗ ನಕಲಿ ಗುರುತಿನ ಮೂಲಕ ಬಂದಿದ್ದು, ಲಷ್ಕರ್ ಇ ತೊಯ್ಬೆ ಮುಖಂಡ ಸಜ್ಜಿದ್ ಮಿರ್ ಆಣತಿಯಂತೆ ವೇಷ ಮರೆಸಿಕೊಂಡು ಬಂದಿದ್ದಾಗಿ ಬಾಯಿ ಬಿಟ್ಟಿದ್ದಾನೆ.