320 ಕೆಜಿ ತೂಕ ಕಳೆದುಕೊಂಡು ಮೊದಲ ಬಾರಿಗೆ ನಡೆದ ಸೌದಿ ಯುವಕ

Update: 2016-02-09 14:46 GMT

ರಿಯಾದ್, ಫೆ. 9: ಜಗತ್ತಿನ ಅತ್ಯಂತ ಭಾರದ ಹದಿಹರೆಯದವ ಎಂಬುದಾಗಿ ಒಂದು ಕಾಲದಲ್ಲಿ ದಾಖಲಾಗಿದ್ದ ವ್ಯಕ್ತಿಯೋರ್ವ ತನ್ನ ಬದುಕಿನಲ್ಲಿ ಮೊದಲ ಬಾರಿಗೆ ನಡೆದಿದ್ದಾರೆ.

ಸೌದಿ ಅರೇಬಿಯದ 24 ವರ್ಷದ ಖಾಲಿದ್ ಮೊಹ್ಸಿನ್ ಅಲ್ ಶಾಯರಿ 610 ಕೆಜಿ ಗರಿಷ್ಠ ಭಾರ ಹೊಂದಿದ್ದರು. ಆಸ್ಪತ್ರೆಯೊಂದರಲ್ಲಿ ಕ್ಷಮತೆ ಚಿಕಿತ್ಸೆಗೆ ಒಳಪಟ್ಟ ಅವರು ಈಗ ಅವರು 320 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ.

ಶಾಯರಿ ತನ್ನ ತೂಕದ ಮೂರನೆ ಎರಡಕ್ಕಿಂತಲೂ ಹೆಚ್ಚು ಭಾಗವನ್ನು ಕಳೆದುಕೊಂಡಿದ್ದಾರೆ ಹಾಗೂ ಇನ್ನಷ್ಟು ತೂಕ ಕಳೆದುಕೊಳ್ಳಲು ತೂಕ ನಷ್ಟ ಕಾರ್ಯಕ್ರಮವನ್ನು ಮುಂದುವರಿಸಿದ್ದಾರೆ ಎಂದು ರಿಯಾದ್‌ನ ಆಸ್ಪತ್ರೆಯೊಂದರಲ್ಲಿ ಅವರಿಗೆ ಚಿಕಿತ್ಸೆ ನೀಡಿರುವ ವೈದ್ಯರು ಹೇಳಿದ್ದಾರೆ.

ಈಗ ಶಾಯರಿ ಝಿಮ್ಮರ್ ಫ್ರೇಮ್‌ನ ಸಹಾಯದಿಂದ ನಡೆಯುತ್ತಿರುವ ವೀಡಿಯೊವೊಂದನ್ನು ಬಿಡುಗಡೆ ಮಾಡಲಾಗಿದೆ.

ಶಾಯರಿಯನ್ನು ರಿಯಾದ್‌ನಲ್ಲಿರುವ ಕಿಂಗ್ ಫಾಹದ್ ಮೆಡಿಕಲ್ ಸಿಟಿಯಲ್ಲಿ ಚಿಕಿತ್ಸೆಗಾಗಿ ವೈದ್ಯಕೀಯ ಹೆಲಿಕಾಪ್ಟರ್‌ನಲ್ಲಿ ಕರೆದುಕೊಂಡು ಹೋದಾಗ ಅವರು ಸುಮಾರು 610 ಕೆಜಿ ತೂಗುತ್ತಿದ್ದರು.

ದೊರೆ ಅಬ್ದುಲ್ಲಾರ ವಿನಂತಿಯಂತೆ 2013ರಲ್ಲಿ ಈ ತರುಣನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಏರ್ಪಾಟು ಮಾಡಲಾಗಿತ್ತು.

ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅಮೆರಿಕದಿಂದ ವಿಶೇಷ ಕ್ರೇನೊಂದನ್ನು ತರಿಸಲಾಗಿತ್ತು ಹಾಗೂ ಆತನನ್ನು ಎತ್ತಲು 30 ವೈದ್ಯಕೀಯ ಸಿಬ್ಬಂದಿ ಮತ್ತು ಸಿವಿಲ್ ರಕ್ಷಣಾ ಸಿಬ್ಬಂದಿ ಕೈಜೋಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News