×
Ad

ಶಾಲಾ ಬಾಲಕನನ್ನು ಥಳಿಸಿ "ಕೊಂದ" ಮುಖ್ಯೋಪಾಧ್ಯಾಯ

Update: 2016-02-09 21:25 IST

ಕೊಲ್ಕತ್ತಾ ,ಫೆ.9 : ಅನುಮತಿಯಿಲ್ಲದೆ ತನ್ನ ಹೆತ್ತವರನ್ನು ಭೇಟಿಯಾಗಲು ಶಾಲಾ ಆವರಣದಿಂದ ಹೊರಗೆ ಹೋಗಿದ್ದಕ್ಕೆ ವಸತಿ ಶಾಲೆಯೊಂದರ ಮುಖ್ಯೋಪಾಧ್ಯಾ ೧೪ ವರ್ಷದ ಬಾಲಕನನ್ನು ಥಳಿಸಿದ ಪರಿಣಾಮ ಬಾಲಕ ಮೃತನಾದ ದಾರುಣ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ. 

ಸ್ಥಳೀಯ ಆಸ್ಪತ್ರೆಗೆ ತಂದಾಗ ಬಾಲಕ ಶಮೀಮ್ ಮಲಿಕ್ ನ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ಆಸ್ಪತ್ರೆಯಲ್ಲಿ ಘೋಸಿಸಲಾಯಿತು. ಪೊಲೀಸರು ಮುರ್ಷಿದಾಬಾದ್ ನ ಕುಗ್ರಾಮ ಮಜ್ಲಿಸ್ ಪುರದ ಅಲ ಇಸ್ಲಾಮಿಯ ಮಿಶನ್ ಶಾಲೆಯ ಮುಖ್ಯೋಪಾಧ್ಯಾಯ ಹಾಗು ಮಾಲಕನನ್ನು ಬಂಧಿಸಿದ್ದಾರೆ. 

" ಆತ ನಮ್ಮ ಒಬ್ಬನೇ ಮಗ. ಸರಕಾರೀ ಶಾಲೆಗೇ ಹೋಗುತ್ತಿದ್ದ ಆತನನ್ನು ಚೆನ್ನಾಗಿ ಕಲಿಯಲಿ ಎಂಬ ಕಾರಣಕ್ಕೆ ಈ ಖಾಸಗಿ ವಸತಿ ಶಾಲೆಗೆ ಸೇರಿಸಿದ್ದೆವು. ಆದರೆ ಅವರು ಆತನನ್ನು ಕೊಂದೇ ಬಿಟ್ಟರು. ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗಬೇಕು" ಎಂದು ಪುತ್ರನನ್ನು ಕಳೆದುಕೊಂಡ ದುಖ: ಭರಿಸಲಾಗದೆ ಗೋಳಾಡುತ್ತಿದ್ದ ತಾಯಿ ಶಮೀಮ ಬೀಬಿ ಆಗ್ರಹಿಸಿದ್ದಾರೆ.

ಮೃತನ ಹೆತ್ತವರು ಸೋಮವಾರ ಸಂಜೆ ಆತನನ್ನು ಭೇಟಿಯಾಗಲು ಶಾಲೆಗೆ ಹೋಗಿದ್ದರು. ಆಗ ಅವರನ್ನು ಮಾತನಾಡಿಸಲು ಶಮೀಮ್ ಶಾಲೆಯ ಆವರಣದಿಂದ ಹೊರ ಬಂದ. ಅನುಮತಿಯಿಲ್ಲದೆ ಹೊರಗೆ ಬಂದಿದ್ದರಿಂದ ಕೆರಳಿದ ಶಾಲಾ ಮುಖ್ಯೋಪಾಧ್ಯಾಯ ಆತನಿಗೆ ಥಳಿಸಿದ್ದಾರೆ. 

" ಶಾಲೆಯ ಆಡಳಿತ ನಮಗೆ ಏನನ್ನು ತಿಳಿಸಿಲ್ಲ. ಮಧ್ಯರಾತ್ರಿ ನಮಗೆ ಆಸ್ಪತ್ರೆಯಿಂದ ದೂರವಾಣಿ ಕರೆ ಮಾಡಿದರು. ಆಗ ಶಾಲೆಗೆ ಕರೆ ಮಾಡಿ ಕೇಳಿದಾಗ ಶಾಲೆಯಲ್ಲಿ ಕಲಿಯುತ್ತಿರುವಾಗ ನಮ್ಮ ಮಗ ಅಸ್ವಸ್ಥನಾದ ಎಂದು ತಿಳಿಸಿದರು" ಎಂದು ಮೃತನ ತಂದೆ ಜುಗ್ನು ಮಲ್ಲಿಕ್ ಹೇಳಿದ್ದಾರೆ. 

ಘಟನೆಯಿಂದ ಪ್ರತಿಭಟನೆ ಭುಗಿಲೆದ್ದಿದ್ದು ಗ್ರಾಮಸ್ಥರು ರಾಜ್ಯ ಹೆದ್ದಾರಿಯನ್ನು ತಡೆದು ಪೊಲೀಸರೊಂದಿಗೆ ಘರ್ಷಣೆಗೆ ಇಳಿದರು. ಶಾಲೆಯ ಹೆಚ್ಚಿನ ಶಿಕ್ಷಕರು ತಲೆ ಮರೆಸಿಕೊಂಡಿದ್ದಾರೆ. 

ಕಳೆದ ಕೆಲವು ವಾರಗಳಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳು ಸಾವಿಗೀಡಾಗುತ್ತಿರುವ ಮೂರನೇ ಘಟನೆ ಇದಾಗಿದೆ. ಕಳೆದ ವಾರ ರಾಚಿಯ ಶಾಲೆಯೊಂದರಲ್ಲಿ ೧೨ ವರ್ಷದ ಹುಡುಗನೊಬ್ಬ  ತಲೆ ಬುರುಡೆ ಮುರಿತ ಹಾಗು ಅಂಗಾಂಗಗಳಿಗೆ ಗಾಯಗಳಾಗಿ ಕೊಲೆಯಾಗಿ ಪತ್ತೆಯಾಗಿದ್ದ. ದೆಹಲಿಯ ರಯಾನ್ ಇಂಟರ್ನ್ಯಾಷನಲ್ ಶಾಲೆಯ ನೀರಿನ ಟ್ಯಾಂಕ್ ನಲ್ಲಿ ೬ ವರ್ಷದ ಬಾಲಕನೊಬ್ಬ ಮುಳುಗಿ ಮೃತಪಟ್ಟಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News