ಕೊಟ್ಪಾ ವಿರುದ್ಧ ಬೀಡಿ ಕಾರ್ಮಿಕರ ರ್ಯಾಲಿ

Update: 2016-02-09 18:29 GMT

ಮಂಗಳೂರು, ಫೆ.9: ಬೀಡಿ ಕಾರ್ಮಿಕರಿಗೆ ಹಾಗೂ ಬೀಡಿ ಉದ್ಯಮಕ್ಕೆ ಮುಳುವಾಗಿರುವ ಕೊಟ್ಪಾ ಕಾಯ್ದೆಯನ್ನು ಸರಕಾರ ಹಿಂದೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ದ.ಕ. ಬೀಡಿ ಉದ್ಯಮ ಮತ್ತು ಕಾರ್ಮಿಕರ ಹಿತರಕ್ಷಣಾ ಸಂಘಟನೆಗಳು ನಗರದ ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ನೆಹರೂ ಮೈದಾನದಲ್ಲಿ ನಡೆದ ಧರಣಿಯನ್ನುದ್ದೇಶಿಸಿ ಮಾತನಾಡಿದ ಬೀಡಿ ಕಾರ್ಮಿಕ ಸಂಘಟನೆಯ ಮುಖಂಡ ಬಿ.ಎಂ.ಭಟ್, ಬೀಡಿ ಉದ್ಯಮದಲ್ಲಿರುವವರಿಗೆ ಪರ್ಯಾಯ ಉದ್ಯೋಗ ನೀಡುವವರೆಗೆ ಈ ಉದ್ಯಮ ವನ್ನು ಸ್ಥಗಿತಗೊಳಿಸುವುದು ಸರಿಯಲ್ಲ. ಇದು ವಿಶ್ವ ಆರೋಗ್ಯ ಸಂಸ್ಥೆಯೊಂದಿಗಿನ ಒಪ್ಪಂದದ ಉಲ್ಲಂಘನೆ ಯಾಗುತ್ತದೆ ಎಂದು ಹೇಳಿದರು.
ಬೀಡಿಕಾರ್ಮಿಕರ ಮುಂದಾಳು ರಮಣಿ ಮಾತನಾಡಿ, ಕೊಟ್ಪಾ ಕಾಯ್ದೆ ಜಾರಿಯಾದರೆ ಕರಾವಳಿಯಲ್ಲಿ ಬೀಡಿ ಉದ್ಯಮವನ್ನು ಅವಲಂಬಿಸಿರುವ ನಾಲ್ಕೂವರೆ ಲಕ್ಷ ಉದ್ಯೋಗಿಗಳು ಬೀದಿ ಪಾಲಾಗಲಿದ್ದಾರೆ. ಆದುದರಿಂದ ಈ ಕಾಯ್ದೆಯನ್ನು ಸರಕಾರ ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಶರಾಬು ಮಾರಾಟಕ್ಕೆ ಅನುಮತಿ ನೀಡುತ್ತಿರುವ ಸರಕಾರ ಬೀಡಿಯನ್ನು ಆರೋಗ್ಯದ ನೆಪವೊಡ್ಡಿ ನಿಷೇಧಿ ಸಲು ಹೊರಟಿರುವುದರ ಹಿಂದೆ ಬಂಡವಾಳಶಾಹಿಶಕ್ತಿಗಳ ಹುನ್ನಾರವಿದೆ ಎಂದು ಆರೋಪಿಸಿದರು.
ಸಿಐಟಿಯು ಮುಖಂಡ ಯು.ಬಿ.ಲೋಕಯ್ಯ ಧರಣಿಯ ಅಧ್ಯಕ್ಷತೆ ವಹಿಸಿದ್ದರು.
ಸಿಐಟಿಯುಸಿ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ, ಎಐಟಿಯುಸಿ ಮುಖಂಡ ಸೀತಾರಾಮ ಬೇರಿಂಜೆ, ಎಚ್‌ಎಂಎಸ್ ಮುಖಂಡ ಮುಹಮ್ಮದ್ ರಫಿ, ದ.ಕ.-ಉಡುಪಿ ಬೀಡಿ ಕಾಂಟ್ರಾಕ್ಟರ್ ಸಂಘದ ಮುಖಂಡ ಕೃಷ್ಣಪ್ಪ, ಎಐಟಿಯುಸಿ ಮುಖಂಡರಾದ ಕೆ.ವಿ.ಭಟ್, ವಿ.ಕುಕ್ಯಾನ್, ಸರಸ್ವತಿ, ಸುಲೋಚನಾ ಹಾಗೂ ಕಾಂಟ್ರಾಕ್ಟ್‌ದಾರರ ಮುಖಂಡರಾದ ಅಲಿಯಬ್ಬ, ಕೃಷ್ಣ ರೈ, ಗಂಗಾಧರ ರೈ, ಅಹ್ಮದ್ ಮೊದಲಾದವರು ಧರಣಿಯ ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News