ಭಾರತದಲ್ಲಿ ಫ್ರೀ ಬೇಸಿಕ್ಸ್ ಬಾಗಿಲು ಮುಚ್ಚಿದ ಫೇಸ್ ಬುಕ್ ,ಮುಕ್ತ ಇಂಟರ್ನೆಟ್ ಹೋರಾಟಕ್ಕೆ ಜಯ
ಹೊಸದಿಲ್ಲಿ , ಫೆ. 10 : ಮುಕ್ತ ಇಂಟರ್ನೆಟ್ ಹೋರಾಟಕ್ಕೆ ಹಾಗು ಅದನ್ನು ಬೆಂಬಲಿಸಿದ ಕೋಟ್ಯಂತರ ಭಾರತೀಯರಿಗೆ ಒಂದು ಸಿಹಿ ಸುದ್ದಿ. ಫೇಸ್ ಬುಕ್ ಭಾರತದಲ್ಲಿ ಫ್ರೀ ಬೇಸಿಕ್ಸ್ ಅನ್ನು ಅಧಿಕೃತವಾಗಿ ಮುಚ್ಚಿದೆ. ಟ್ರಾಯ್ ಬೇರೆ ಬೇರೆ ಇಂಟರ್ನೆಟ್ ಸೇವೆಗಳಿಗೆ ಬೇರೆ ಬೇರೆ ದರ ನಿಗದಿಯ ವಿರುದ್ಧ ಆದೇಶ ನೀಡಿದ ಬಳಿಕ ತಾನು ಅದರ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಫೇಸ್ ಬುಕ್ ಮುಖ್ಯಸ್ಥ ಮಾರ್ಕ್ ಝುಕರ್ ಬರ್ಗ್ ಹೇಳಿಕೆ ನೀಡಿದ್ದರೂ ಈಗ ಅದರಿಂದ ಹಿಂದೆ ಸರಿದಿದ್ದಾರೆ.
"ಫ್ರೀ ಬೇಸಿಕ್ಸ್ ಇನ್ನು ಮುಂದೆ ಭಾರತೀಯರಿಗೆ ಲಭ್ಯವಿಲ್ಲ " ಎಂದು ಫೇಸ್ ಬುಕ್ ವಕ್ತಾರರೊಬ್ಬರು ಇಕನಾಮಿಕ್ ಟೈಮ್ಸ್ ಗೆ ಹೇಳಿಕೆ ನೀಡಿದ್ದಾರೆ.
ಇದರೊಂದಿಗೆ ಟ್ರಾಯ್ , ಫೇಸ್ ಬುಕ್ ಹಾಗು ಮುಕ್ತ ಇಂಟರ್ನೆಟ್ ಗಾಗಿ ಚಳವಳಿ ಆರಂಭಿಸಿದ್ದ ಕಾರ್ಯಕರ್ತರ ನಡುವಿನ ಹಗ್ಗ ಜಗ್ಗಾಟಕ್ಕೆ ತೆರೆ ಬಿದ್ದಿದೆ. ಟ್ರಾಯ್ ಆದೇಶದ ಬಳಿಕ ಫೇಸ್ ಬುಕ್ ಹಾಗು ರಿಲಯನ್ಸ್ ಫ್ರೀ ಬೇಸಿಕ್ಸ್ ಅನ್ನು ಪಾವತಿ ಸೇವೆಯಾಗಿ ಮಾಡಲು ನಿರ್ಧರಿಸಿದ್ದರು . ಭಾರತದಲ್ಲಿ ಫ್ರೀ ಬೇಸಿಕ್ಸ್ ಜಾರಿಗೆ ರಿಲಯನ್ಸ್ ಫೇಸ್ ಬುಕ್ ನೊಂದಿಗೆ ಒಪ್ಪಂದ ಮಾಡಿ ಕೊಂಡಿತ್ತು .