ದಿಲ್ಲಿ: ಎ.15ರಿಂದ ಎರಡನೇ ಸುತ್ತಿನ ಸಮ-ಬೆಸ ಯೋಜನೆಗೆ ಚಾಲನೆ
Update: 2016-02-11 19:55 IST
ಹೊಸದಿಲ್ಲಿ,ಫೆ.11: ಸಮ-ಬೆಸ ಯೋಜನೆಯ ಎರಡನೇ ಹಂತವು ಎ.15ರಿಂದ ಆರಂಭಗೊಂಡು 15 ದಿನಗಳ ಕಾಲ ಜಾರಿಯಲ್ಲಿರುತ್ತದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗುರುವಾರ ಇಲ್ಲಿ ಪ್ರಕಟಿಸಿದರು. ರಾಷ್ಟ್ರ ರಾಜಧಾನಿಯಲ್ಲಿ ಅಪಾಯಕಾರಿ ಮಟ್ಟದಲ್ಲಿರುವ ವಾಯುಮಾಲಿನ್ಯ ಮತ್ತು ವಾಹನಗಳ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವುದು ಯೋಜನೆಯ ಉದ್ದೇಶವಾಗಿದೆ.
ಸಮ ಮತ್ತು ಬೆಸ ಸಂಖ್ಯೆಯಿಂದ ಕೊನೆಗೊಳ್ಳುವ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಹನಗಳು ದಿನ ಬಿಟ್ಟು ದಿನ ಸಂಚರಿಸುವ ಈ ಯೋಜನೆಯಿಂದ ಮಹಿಳಾ ಚಾಲಕಿಯರು ಮತ್ತು ದ್ವಿಚಕ್ರ ವಾಹನಗಳಿಗೆ ವಿನಾಯಿತಿಯನ್ನು ನೀಡಲಾಗಿದೆ. ಯೋಜನೆಯ ಮೊದಲ ಹಂತ ಜ.1ರಿಂದ 15ರವರೆಗೆ ಜಾರಿಯಲ್ಲಿತ್ತು.
ಯೋಜನೆಯ ಕುರಿತು ಸಮೀಕ್ಷಾ ವರದಿಯೊಂದನ್ನು ಬುಧವಾರ ಬಿಡುಗಡೆಗೊಳಿಸಿದ್ದ ಆಪ್ ಸರಕಾರವು,ಯೋಜನೆಯ ಮರು ಜಾರಿಗೆ ಜನರು ಭಾರೀ ಒಲವು ವ್ಯಕ್ತಪಡಿಸಿದ್ದಾರೆ ಎಂದು ಹೇಳಿತ್ತು.