‘ಮಂಜೇಶ್ವರ ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರ ವರದಿ ಸತ್ಯಕ್ಕೆ ದೂರ’

Update: 2016-02-11 18:53 GMT

ಮಂಜೇಶ್ವರ: ಮಂಜೇಶ್ವರ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಸ್ಥಳಾಂತರ ಮಾಡಲಾಗುತ್ತಿದೆಯೆಂದು ಮಾಧ್ಯಮಗಳಲ್ಲಿ ಬಂದ ವರದಿ ಸತ್ಯಕ್ಕೆ ದೂರ ಎಂದು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ. ಅಶ್ರಫ್ ನೇತೃತ್ವದಲ್ಲಿ ಜನ ಪ್ರತಿನಿಧಿಗಳು ಮಂಜೇಶ್ವರ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಂಜೇಶ್ವರ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಸ್ಥಳಾಂತರ ಮಾಡಲಾಗುತ್ತಿದೆಯೆಂಬ ಸುದ್ದಿಗಳು ಮಾಧ್ಯಮಗಳಲ್ಲಿ ನಿರಂತರವಾಗಿ ಬರುತ್ತಿದೆ. ಇಂತಹ ಯಾವುದೇ ತೀರ್ಮಾನಗಳು ಅಭಿವೃದ್ಧಿ ಸಮಿತಿಯಲ್ಲಿ ಚರ್ಚೆ ಬಂದಿಲ್ಲ. ಪ್ರಸ್ತುತ ಸಬ್ ರಿಜಿಸ್ಟ್ರಾರ್ ಕಚೇರಿಯ ಮೇಲ್ಛಾವಣಿ ಶಿಥಿಲಾವಸ್ತೆಯಲ್ಲಿರುವುದರಿಂದ ದುರಸ್ತಿ ಕಾರ್ಯ ಬಗ್ಗೆ ಸಭೆಯಲ್ಲಿ ಪ್ರಸ್ತಾಪ ಬಂದಿದೆಯೇ ಹೊರತು ಕಚೇರಿ ಸ್ಥಳಾಂತರ ಬಗ್ಗೆ ಚರ್ಚೆ ಬಂದಿಲ್ಲ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಜೇಶ್ವರ ಗ್ರಾಪಂ ಅಧ್ಯಕ್ಷ ಅಝೀಝ್ ಹಾಜಿ, ಸ್ಥಾಯಿ ಸಮಿತಿ ಅಧ್ಯಕ್ಷ ಮುಖ್ತಾರ್ ಉದ್ಯಾವರ, ಅಬ್ದುರ್ರಹ್ಮಾನ್ ಹಾಜಿ, ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಮುಸ್ತಫಾ, ಮಂಜೇಶ್ವರ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ಯಾಕೂಬ್ ಉಪಸ್ಥಿತರಿದ್ದರು.

ಹಣ ಮಾಡುವ ಕಾಯಕ : ಕೆಲವು ರಾಜಕೀಯ ಮುಖಂಡರು ಅಭಿವೃದ್ಧಿ ಕ್ರಿಯಾ ಸಮಿತಿ ಹೆಸರಿನಲ್ಲಿ ಹಣ ಮಾಡುವ ಕಾಯಕವನ್ನು ಮಾಡುತ್ತಿದ್ದಾರೆಂದು ಅಶ್ರಫ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಯಾಕೂಬ್ ಮೊಯ್ದಿನ್ ಹಾಜರಿದ್ದರೂ ಈ ಆರೋಪಕ್ಕೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ವಿಶೇಷ.

ಮುಷ್ಕರ ಹಿಂದೆಗೆದ ದಾಸ್ತಾವೇಜು ಬರಹಗಾರರ ಸಂಘಟನೆ: ಮಂಜೇಶ್ವರ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಸ್ಥಳಾಂತರ ಮಾಡಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ಬಂದ ವರದಿಯ ಹಿನ್ನೆಲೆಯಲ್ಲಿ ಮಂಜೇಶ್ವರ ದಾಸ್ತಾವೇಜು ಬರಹಗಾರರ ಸಂಘಟನೆ ಕರೆ ನೀಡಿದ್ದ ಮುಷ್ಕರ ಹಿಂಪಡೆದಿರುವುದಾಗಿ ಸಂಘಟನೆಯ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News