ಮನೆಗಳಿಗೆ ಸೋಲಾರ್ ಮೇಲ್ಛಾವಣಿ ಫೆ. 17ರಂದು ಬೃಹತ್ ಸಾಲ ಮೇಳ ಶಿಬಿರ

Update: 2016-02-12 08:40 GMT

ಮಂಗಳೂರು, ಫೆ. 12: ದಕ್ಷಿಣ ಕನ್ನಡದಲ್ಲಿ ಪರ್ಯಾಯ ವಿದ್ಯುತ್ ಆಗಿ ಸೌರ ಶಕ್ತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಾಗೂ ಸೌರ ವಿದ್ಯುತ್ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ಫೆ. 17ರಂದು ನಗರದ ಪುರಭವನದಲ್ಲಿ ಮನೆಗಳಿಗೆ ಸೋಲಾರ್ ಮೇಲ್ಛಾವಣಿ ಅಳವಡಿಸಲು ಬೃಹತ್ ಬ್ಯಾಂಕ್ ಸಾಲ ಮೇಳ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಮಂಗಳೂರು ತಾಲೂಕಿನ ಎಲ್ಲಾ ಬ್ಯಾಂಕ್‌ಗಳ ಮೂಲಕ ಮನೆಗಳಿಗೆ ಸೋಲಾರ್ ಮೇಲ್ಛಾವಣಿ ಅಳವಡಿಸಲು ಈ ಶಿಬಿರದ ಮೂಲಕ ಹಣಕಾಸಿನ ನೆರವನ್ನು ಒದಗಿಸುವ ಪ್ರಕ್ರಿಯೆ ನಡೆಯಲಿದೆ ಎಂದರು.


ಸೌರಶಕ್ತಿ ವಿದ್ಯುತ್ ಬಳಕೆಗೆ ಉತ್ತೇಜನ ನೀಡುವ ಮೂಲಕ ವಿದ್ಯುತ್ ಕೊರತೆಯನ್ನು ನೀಗಿಸುವುದು ಈ ಶಿಬಿರದ ಪ್ರಮುಖ ಉದ್ದೇಶವಾಗಿದ್ದು, ಬ್ಯಾಂಕುಗಳು ಆಸಕ್ತ ಹಾಗೂ ಅರ್ಹ ಮನೆಗಳವರಿಗೆ ಸ್ಥಳದಲ್ಲೇ ಸಾಲ ಮಂಜೂರಾತಿಯನ್ನು ಈ ಶಿಬಿರದ ಮೂಲಕ ನೀಡಲಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಪರ್ಯಾಯ ಇಂಧನ ಬಳಕೆಗೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಮೆಸ್ಕಾಂನಿಂದ ಅಂಗೀಕೃತವಾದ ಎಜೆನ್ಸಿಗಳ ಮೂಲಕ ಮನೆಗಳಿಗೆ ಸೋಲಾರ್ ಮೇಲ್ಛಾವಣಿಗಳನ್ನು ಅಳವಡಿಸಲಾಗುವುದು ಎಂದು ಅವರು ಹೇಳಿದರು.


ಮಂಗಳೂರು ನಗರದಲ್ಲಿ ಈಗಾಗಲೇ ಮನೆಗಳ ಮೇಲ್ಛಾವಣಿಗೆ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಲು ಹಣಕಾಸಿನ ನೆರವು ಕೋರಿ 38 ಅರ್ಜಿಗಳು ಸ್ವೀಕೃತವಾಗಿದ್ದು, 29 ಅರ್ಜಿಗಳನ್ನು ಮಂಜೂರು ಮಾಡಲಾಗಿದೆ. 9 ಅರ್ಜಿಗಳು ಮಂಜೂರಾತಿ ಪ್ರಕ್ರಿಯೆಯಲ್ಲಿವೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ರಾಘವ್ ವಿ. ಯಜಮಾನ್ಯ ಈ ಸಂದರ್ಭ ತಿಳಿಸಿದರು.
ಗೋಷ್ಠಿಯಲ್ಲಿ ನಬಾರ್ಡ್ ಎಜಿಎಂ ಪ್ರಸಾದ್ ಉಪಸ್ಥಿತರಿದ್ದರು.

15 ದಿನಗಳಲ್ಲಿ 1757 ಯುನಿಟ್ ವಿದ್ಯುತ್ ಉತ್ಪಾದನೆ


ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಳವಡಿಸಲಾಗಿರುವ ಸೌರಶಕ್ತಿ ಪ್ಯಾನಲ್‌ಗಳ ಮೂಲಕ ಜನವರಿ 27ರಿಂದ ಫೆ. 11ರವರೆಗೆ 1757 ಯುನಿಟ್ ವಿದ್ಯುತ್ ಉತ್ಪಾದನೆಯಾಗಿದೆ. ಇದರ ಪ್ರಕಾರ ದಿನವೊಂದಕ್ಕೆ ಸರಾಸರಿ 117 ಯುನಿಟ್ ವಿದ್ಯುತ್ ಸೌರಶಕ್ತಿಯಿಂದ ಉತ್ಪಾದಿಸಲಾಗಿದೆ. ಇದರಿಂದಾಗಿ ಜಿಲ್ಲಾಧಿಕಾರಿ ಕಚೇರಿಯ ಸಂಪೂರ್ಣ ವಿದ್ಯುತ್ ಬೇಡಿಕೆ ಸುಮಾರು ಅರ್ದದಷ್ಟು ವಿದ್ಯುತ್ ಬೇಡಿಕೆಯನ್ನು ಸೌರ ಶಕ್ತಿಯಿಂದ ಪೂರೈಸಲು ಸಾಧ್ಯವಾಗುವ ನಿರೀಕ್ಷೆ ಇದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News