×
Ad

ಸಲ್ಮಾನ್,ಶಾರುಕ್ ವಿರುದ್ಧ ಅಪರಾಧ ರೂಪಿಸಲಾಗಿಲ್ಲ:ಪೊಲೀಸರ ಹೇಳಿಕೆ

Update: 2016-02-12 21:52 IST

ಹೊಸದಿಲ್ಲಿ,ಫೆ.12: ಬಿಗ್ ಬಾಸ್-9ರ ಸೆಟ್‌ನಲ್ಲಿ ಹಿಂದುಗಳ ನಂಬಿಕೆಗಳನ್ನು ಅವಮಾನಿಸಿದ್ದರೆಂಬ ಆರೋಪಕ್ಕೊಳಗಾಗಿರುವ ಬಾಲಿವುಡ್ ನಟರಾದ ಶಾರುಕ್ ಖಾನ್ ಮತ್ತು ಸಲ್ಮಾನ್ ಖಾನ್ ಅವರ ವಿರುದ್ಧ ಯಾವುದೇ ಸಂಜ್ಞೇಯ ಅಪರಾಧವನ್ನು ರೂಪಿಸಲಾಗಿಲ್ಲ ಎಂದು ದಿಲ್ಲಿ ಪೊಲೀಸರು ಶುಕ್ರವಾರ ಇಲ್ಲಿಯ ಹೆಚ್ಚುವರಿ ಮುಖ್ಯ ಮಹಾನಗರ ನ್ಯಾಯಾಲಯಕ್ಕೆ ತಿಳಿಸಿದರು. ಸ್ಟುಡಿಯೋದಲ್ಲಿ ರಿಯಾಲಿಟಿ ಶೋ ಶೂಟಿಂಗ್ ಸಂದರ್ಭದಲ್ಲಿ ಈ ನಟರು ಶೂಗಳನ್ನು ಧರಿಸಿಕೊಂಡು ದೇವಸ್ಥಾನದ ಸೆಟ್ ಅನ್ನು ಪ್ರವೇಶಿಸಿದ್ದು, ಧಾರ್ಮಿಕ ಭಾವನೆಗಳನ್ನು ನೋಯಿಸುವ ಉದ್ದೇಶ ಅವರಲ್ಲಿರಲಿಲ್ಲ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದರು.

ಹಿಂದುಗಳ ಭಾವನೆಗಳಿಗೆ ನೋವನ್ನುಂಟು ಮಾಡಿದ್ದಕ್ಕಾಗಿ ಖಾನ್‌ದ್ವಯರು,ಕಲರ್ಸ್ ಚಾನೆಲ್ ಮತ್ತು ಬಿಗ್ ಬಾಸ್-9ರ ನಿರ್ದೇಶಕ ಹಾಗೂ ನಿರ್ಮಾಪಕರ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ನ್ಯಾಯವಾದಿ ಗೌರವ ಗುಲಾಟಿ ನ್ಯಾಯಾಲಯದಲ್ಲಿ ಸಲ್ಲಿಸಿರುವ ದೂರಿನಲ್ಲಿ ಕೋರಿದ್ದಾರೆ. ನ್ಯಾ.ವಿ.ಕೆ.ಗೌತಮ್ ಅವರು ಪ್ರಕರಣದ ಮುಂದಿನ ವಿಚಾರಣೆಯನ್ನು ಮಾ.2ಕ್ಕೆ ನಿಗದಿಗೊಳಿಸಿ ಆದೇಶಿಸಿದರು. ಮೇರಠ್ ನ್ಯಾಯಾಲಯದಲ್ಲಿಯೂ ಇಂತಹುದೇ ದೂರು ದಾಖಲಾಗಿದ್ದು ಅದನ್ನು ಈಗಾಗಲೇ ವಜಾ ಮಾಡಲಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News