×
Ad

ನ್ಯಾಶನಲ್ ಹೆರಾಲ್ಡ್ ಹಗರಣ: ಸೋನಿಯಾ-ರಾಹುಲ್ ಗಾಂಧಿ ಕೋರ್ಟ್ ಹಾಜರಿಗೆ ವಿನಾಯ್ತಿ

Update: 2016-02-12 23:58 IST

ಹೊಸದಿಲ್ಲಿ, ಫೆ.12: ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ತಮ್ಮ ವಿರುದ್ಧ ವಿಚಾರಣೆಯನ್ನು ರದ್ದುಗೊಳಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಪುತ್ರ, ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿದೆ. ಆದಾಗ್ಯೂ, ಪ್ರಕರಣದ ವಿಚಾರಣೆಗೆ ಸ್ವತಃ ಹಾಜರಾಗುವುದರಿಂದ ಸೋನಿಯಾ ಹಾಗೂ ರಾಹುಲ್‌ರಿಗೆ ವಿನಾಯ್ತಿ ನೀಡಿದೆ.

ಅವರ ಉಪಸ್ಥಿತಿಯು ನ್ಯಾಯಾಲಯದಲ್ಲಿ ಅನುಕೂಲಕ್ಕಿಂತ ಹೆಚ್ಚು ಅನನುಕೂಲವನ್ನೇ ಮಾಡಬಹುದು. ಅವರು ಅಷ್ಟು ಖ್ಯಾತಿಯುಳ್ಳವರು. ಆದುದರಿಂದ ಎಲ್ಲಿಗೂ ಓಡಿಹೋಗಲಾರರು ಎಂದಿರುವ ಸುಪ್ರೀಂ ಕೋರ್ಟ್, ವಿಚಾರಣೆಯ ಯಾವುದೇ ಹಂತದಲ್ಲಿ ಈ ಇಬ್ಬರು ಅಗ್ರ ಕಾಂಗ್ರೆಸ್ ನಾಯಕರ ವೈಯಕ್ತಿಕ ಹಾಜರಾತಿ ಅಗತ್ಯವೆಂದು ಕಂಡಲ್ಲಿ ವಿಚಾರಣಾ ನ್ಯಾಯಾಲಯ ಅವರನ್ನು ಕರೆಸಿಕೊಳ್ಳಬಹುದೆಂದು ಸ್ಪಷ್ಟಪಡಿಸಿದೆ.

ದಿಲ್ಲಿಯ ವಿಚಾರಣಾ ನ್ಯಾಯಾಲಯವೊಂದು ನಿಯಮಿತವಾಗಿ ವಿಚಾರಣೆಯ ವೇಳೆ ಹಾಜರಾಗುವಂತೆ ನೀಡಿದ್ದ ಆದೇಶ ಪ್ರಶ್ನಿಸಿ, ಸೋನಿಯಾ ಹಾಗೂ ರಾಹುಲ್ ಈ ತಿಂಗಳಾರಂಭದಲ್ಲಿ ಸುಪ್ರೀಂ ಕೋರ್ಟ್‌ನ ಮೆಟ್ಟಲೇರಿದ್ದರು. ಮುಂದಿನ ವಿಚಾರಣೆ ಫೆ.20ರಂದು ನಡೆಯಲಿದೆ.

ಸೋನಿಯಾ ಹಾಗೂ ರಾಹುಲ್ ವಿರುದ್ಧದ ಸಮನ್ಸ್ ರದ್ದುಪಡಿಸಲು ದಿಲ್ಲಿ ಹೈಕೋರ್ಟ್ ನಿರಾಕರಿಸಿದ ಬಳಿಕ ಅವರಿಬ್ಬರೂ ಡಿ.19ರಂದು ಪಾಟಿಯಾಲ ಹೌಸ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಬಲಪ್ರದರ್ಶನ ಮಾಡುವ ರೀತಿಯಲ್ಲಿ ಪಕ್ಷದ ಹಿರಿಯ ನಾಯಕರ ಜೊತೆ ನ್ಯಾಯಾಲಯ ಪ್ರವೇಶಿಸಿದ್ದ ತಾಯಿ-ಮಗ ಕೇವಲ 5 ನಿಮಿಷಗಳೊಳಗೆ ಜಾಮೀನು ಪಡೆದು ಹೊರ ನಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News