×
Ad

ನನ್ನ ಮಗನ ಹಿಂದುತ್ವ ವಿರೋಧಿ ರಾಜಕೀಯಕ್ಕಾಗಿ ಆತನನ್ನು ಬಲಿಪಶು ಮಾಡಲಾಗುತ್ತಿದೆ:ಕನ್ಹಯಾ ತಂದೆ

Update: 2016-02-14 18:05 IST

ಬೇಗುಸರಾಯ್,ಫೆ.14: ನನ್ನ ಮಗ ರಾಷ್ಟ್ರವಿರೋಧಿಯಲ್ಲ. ಹಿಂದುತ್ವ ರಾಜಕೀಯಕ್ಕೆ ತನ್ನ ವಿರೋಧದಿಂದಾಗಿ ಆತನನ್ನು ಬಲಿಪಶುವನ್ನಾಗಿ ಮಾಡಲಾಗುತ್ತಿದೆ. ಆತ ಯಾವುದೇ ತಪ್ಪನ್ನು ಮಾಡಿಲ್ಲ. ಹೀಗಿರುವಾಗ ಕ್ಷಮೆಯಾಚನೆಯ ಪ್ರಶ್ನೆ ಎಲ್ಲಿದೆ...ಎಂದು ಪ್ರಶ್ನಿಸಿದವರು ಜೈಶಂಕರ್ ಸಿಂಗ್. ಅಲ್ಲಲ್ಲಿ ಪ್ಲಾಸ್ಟರ್ ಕಿತ್ತು ಹೋಗಿರುವ ಮಾಸಲು ನೀಲಿಬಣ್ಣದ ಗೋಡೆಗಳ ಕೋಣೆಯಲ್ಲಿ ಹಗ್ಗದ ಮಂಚವೊದರ ಮೇಲೆ ಕುಳಿತಿದ್ದ ಅವರು ದೇಶದ್ರೋಹದ ಆರೋಪದಲ್ಲಿ ಶುಕ್ರವಾರ ದಿಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯಾ ಕುಮಾರ ತಂದೆ. ನನ್ನ ಮಗನಿಗೆ ಶಾಲಾದಿನಗಳಿಂದಲೇ ರಾಜಕೀಯದಲ್ಲಿ ಆಸಕ್ತಿ ಇತ್ತು. ಆದರೆ ಅವನೆಂದೂ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ಮಾತನಾಡಿದವನಲ್ಲ ಎಂದು ಕನ್ಹಯಾ ತಾಯಿ ಮೀನಾದೇವಿ ಹೇಳಿದರು.


ಸಿಂಗ್ ಶುಕ್ರವಾರ ಬೆಳಿಗ್ಗೆಯಿಂದಲೇ ಟಿವಿ ವೀಕ್ಷಿಸುತ್ತ ತನ್ನ ಮಗನ ಕುರಿತು ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅವರ ಆರೋಗ್ಯ ಸರಿಯಲ್ಲ ಎನ್ನುವುದಕ್ಕೆ ಅಲ್ಲಿಯೇ ಮೊಳೆಯೊಂದಕ್ಕೆ ನೇತಾಡುತ್ತಿದ್ದ ಔಷಧಿಗಳಿದ್ದ ಪ್ಲಾಸ್ಟಿಕ್ ಚೀಲ ಸಾಕ್ಷಿಯಾಗಿತ್ತು. ಸಿಂಗ್ ದಂಪತಿ ಬಿಹಾರದ ಬೇಗುಸರಾಯ್ ಜಿಲ್ಲೆಯ ಮಸ್ಲನ್‌ಪುರ-ಬಿಹಾಟ್ ಗ್ರಾಮದಲ್ಲಿ ಈಗಲೋ ಆಗಲೋ ಎನ್ನುವಂತಿರುವ ಶಿಥಿಲ ಮನೆಯಲ್ಲಿ ಬದುಕು ದೂಡುತ್ತಿದ್ದಾರೆ. ಸಣ್ಣ ಕೃಷಿಕನಾಗಿರುವ ಸಿಂಗ್ ಎರಡು ವರ್ಷಗಳಿಂದ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆಯಲ್ಲಿಯೇ ದಿನಗಳನ್ನು ಕಳೆಯುತ್ತಿದ್ದಾರೆ. ತುತ್ತಿನ ಚೀಲಗಳನ್ನು ತುಂಬಿಸಲು ಮೀನಾದೇವಿ ಮಾಸಿಕ 4,000 ರೂ.ಸಂಬಳಕ್ಕೆ ಅಂಗನವಾಡಿ ಕಾರ್ಯಕರ್ತೆಯಾಗಿ ದುಡಿಯುತ್ತಿದ್ದಾರೆ. ಸಿಪಿಐ ನಾಯಕ ಡಿ.ರಾಜಾ ಅವರು ಶನಿವಾರ ತನಗೆ ದೂರವಾಣಿ ಕರೆ ಮಾಡಿ ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ ಅವರೊಂದಿಗಿನ ಭೇಟಿಯ ವಿವರ ನೀಡಿದ್ದಾಗಿ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.


ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದ ವಿದ್ಯಾರ್ಥಿಗಳ ವೀಡಿಯೊ ಫೂಟೇಜ್‌ನಲ್ಲಿ ತನ್ನ ಮಗನಿಲ್ಲ ಎಂದು ಹೇಳಿದ ಸಿಂಗ್, ಇತರ ಕೋಟ್ಯಂತರ ಯುವಜನರಂತೆ ತನ್ನ ಮಗನೂ ರಾಷ್ಟ್ರವಾದಿಯಾಗಿದ್ದಾನೆ, ಆದರೆ ಆತ ಎಡಪಂಥೀಯ ಸಿದ್ಧಾಂತಗಳನ್ನು ಅನುಸರಿಸುತ್ತಿದ್ದಾನೆ. ಹಿಂದುತ್ವ ರಾಜಕೀಯವನ್ನು ವಿರೋಧಿಸುತ್ತಿರುವುದಕ್ಕಾಗಿ ಆತನನ್ನು ಬಲಿಪಶುವನ್ನಾಗಿ ಮಾಡಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News