ತನ್ನ ವರ್ಗಾವಣೆಗೆ ತಾನೇ ತಡೆಯಾಜ್ಞೆ ನೀಡಿದ ಜಡ್ಜ್!
ಚೆನ್ನೈ, ಫೆ.15: ತನ್ನನ್ನು ಕಲ್ಕತ್ತಾ ಹೈಕೋರ್ಟ್‌ಗೆ ವರ್ಗಾವಣೆ ಮಾಡಿ ಸುಪ್ರೀಂ ಕೋರ್ಟ್ ಹೊರಡಿಸಿದ್ದ ಆದೇಶವೊಂದಕ್ಕೆ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಯೊಬ್ಬರು ತಾನೇ ತಡೆಯಾಜ್ಞೆ ವಿಧಿಸಿದ ಅಭೂತಪೂರ್ವ ವಿದ್ಯಮಾನ ವರದಿಯಾಗಿದೆ.
ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ತಡೆ ನೀಡಿದ್ದು ಮಾತ್ರವಲ್ಲದೆ, ನ್ಯಾಯಾಲಯಕ್ಕೆ ಈ ಬಗ್ಗೆ ಲಿಖಿತ ಹೇಳಿಕೆ ನೀಡುವಂತೆಯೂ ಭಾರತದ ಮುಖ್ಯ ನ್ಯಾಯಮೂರ್ತಿಗೆ ಮದ್ರಾಸ್ ಹೈಕೋಟ್‌ನ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಆದೇಶಿಸಿದ್ದಾರೆ.
ಈ ವಿಷಯದ ಕುರಿತು ಲಿಖಿತ ಉತ್ತರವನ್ನು ಎ. 29ರೊಳಗೆ ತಮ್ಮ ಸಹಾಯಕರ ಮೂಲಕ ಸಲ್ಲಿಸುವಂತೆ ತಮ್ಮನ್ನು ವಿನಂತಿಸಿಕೊಳ್ಳುವೆನೆಂದು ಹೇಳಿರುವ ನ್ಯಾ. ಕರ್ಣನ್ ಅಲ್ಲಿಯವರೆಗೆ ವರ್ಗಾವಣೆ ಆದೇಶದ ಮೇಲಿನ ಮಧ್ಯಾಂತರ ತಡೆಯಾಜ್ಞೆ ಚಾಲ್ತಿಯಲ್ಲಿರುತ್ತದೆಂದು ತಿಳಿಸಿದ್ದಾರೆ.
ತನ್ನನ್ನು ಕೊಲ್ಕತ್ತಾ ಹೈಕೋರ್ಟ್‌ಗೆ ವರ್ಗಾಯಿಸಿದ ಸಿಜೆಯ ಆದೇಶವನ್ನು ‘ಪ್ರಯೋಗಿಕ ಶಿಫಾರಸು ಆದೇಶ’ ಎಂದು ಕರೆದಿರುವ ನ್ಯಾ.ಕರ್ಣನ್, ಆದೇಶವನ್ನು ಸಿಜೆಐ ತನ್ನ ನ್ಯಾಯಾಂಗ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ನಡೆಸಬಾರದು ಎಂದಿದ್ದಾರೆ.
ತಾನು ಅರ್ಹತಾ ಆದೇಶವೊಂದನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿರುವುದರಿಂದ, ಅವರು ದಯವಿಟ್ಟು ತನ್ನ ನ್ಯಾಯಾಂಗ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ನಡೆಸಬಾರದು ಕರ್ಣನ್ ಸಿಜೆಐಗೆ ವಿನಂತಿ ಮಾಡಿದ್ದಾರೆ.
ನ್ಯಾ. ಕರ್ಣನ್‌ರಿಗೆ ಯಾವುದೇ ನ್ಯಾಯಾಂಗ ಕೆಲಸವನ್ನು ಒಪ್ಪಿಸದಂತೆ ಸುಪ್ರೀಂಕೋರ್ಟ್ ಸೋಮವಾರ ಮದ್ರಾಸ್ ಹೈಕೋರ್ಟ್‌ನ ಮುಖ್ಯನಾಯಮೂರ್ತಿಗೆ ಸೂಚನೆ ನೀಡಿದೆ. ಕರ್ಣನ್ ಯಾವುದೇ ನ್ಯಾಯಾಂಗದ ಕೆಲಸ ಮಾಡದಂತೆ ಆದೇಶ ನೀಡಬೇಕೆಂದು ಕೋರಿ, ಮದ್ರಾಸ್ ಹೈಕೋರ್ಟ್‌ನ ಮುಖ್ಯನಾಯಮೂರ್ತಿಯ ಖಾಸಗಿ ಕಾರ್ಯದರ್ಶಿಯೂ ಆಗಿರುವ ರಿಜಿಸ್ಟ್ರಾರ್‌ರ ಅರ್ಜಿಯೊಂದರ ಸಂಬಂಧ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.
ಇದೇ ವೇಳೆ ನ್ಯಾ. ಕರ್ಣನ್, ನ್ಯಾಯಾಲಯದಲ್ಲೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲು ಪ್ರಯತ್ನಿಸಿದರು. ಆದರೆ, ನ್ಯಾಯಾಲಯದೊಳಗೆ ಟಿವಿ ಕ್ಯಾಮರಾಗಳಿಗೆ ನ್ಯಾಯಾಲಯದ ಆಡಳಿತವು ಅವಕಾಶ ನೀಡಲಿಲ್ಲ. ಆಗ ನ್ಯಾ. ಕರ್ಣನ್ ಹೊರ ನಡೆದು ನ್ಯಾಯಾಲಯದ ಆವರಣದ ಹೊರಗೆ ಪತ್ರಕರ್ತರೊಡನೆ ಮಾತನಾಡಿದರು.
ಆವರು ಅಪರಾಹ್ನ 2:30ಕ್ಕೆ ಅವರ ಚೇಂಬರ್‌ನೊಳಗೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುವೆನೆಂದು ತಿಳಿಸಿದ್ದಾರೆ.
ಭಾರತದಲ್ಲಿ ಹುಟ್ಟಿದ್ದಕ್ಕೆ ನಾಚಿಕೆಯಾಗುತ್ತಿದೆ: ನ್ಯಾ.ಕರ್ಣನ್
ಹೊಸದಿಲ್ಲಿ,ಫೆ.15: ತನಗೆ ನ್ಯಾಯಾಂಗದ ಯಾವುದೇ ಪ್ರಕರಣವನ್ನು ಒಪ್ಪಿಸದಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಬಗ್ಗೆ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ಸಿ.ಎಸ್.ಕರ್ಣನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ದಲಿತನಾಗಿರುವುದರಿಂದ ನನ್ನ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಭಾರತದಲ್ಲಿ ಜನಿಸಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ. ಜಾತಿ ವ್ಯವಸ್ಥೆಯಿಲ್ಲದ ದೇಶಕ್ಕೆ ವಲಸೆಹೋಗಲು ನಾನು ಬಯಸುತ್ತಿದ್ದೇನೆ ಎಂದವರು ಹೇಳಿದ್ದಾರೆ.
ನ್ಯಾ.ಕರ್ಣನ್‌ಗೆ ಪ್ರಕರಣ ಒಪ್ಪಿಸಬೇಡಿ: ಸು.ಕೋರ್ಟ್
ಹೊಸದಿಲ್ಲಿ, ಫೆ.15: ಮದ್ರಾಸ್ ಹೈಕೋರ್ಟ್‌ನ ವಿವಾದಿತ ನ್ಯಾಯಮೂರ್ತಿ ಸಿ.ಎಸ್.ಕರ್ಣನ್‌ರಿಗೆ ಯಾವುದೇ ಪ್ರಕರಣವನ್ನು ಒಪ್ಪಿಸದಂತೆ ಆದೇಶ ನೀಡುವ ಮೂಲಕ, ಸುಪ್ರೀಂಕೋರ್ಟ್, ತನ್ನ ಆದೇಶಕ್ಕೆ ತಡೆಯಾಜ್ಞೆ ನೀಡಿರುವ ನ್ಯಾಯಮೂರ್ತಿಗೆ ಅಭೂತಪೂರ್ವ ತಿರುಗೇಟು ನೀಡಿದೆ.
ತನ್ನನ್ನು ಕಲ್ಕತ್ತಾ ಹೈಕೋರ್ಟ್‌ಗೆ ವರ್ಗಾವಣೆಗೊಳಿಸಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನೇತೃತ್ವದ ನ್ಯಾಯಮೂರ್ತಿಗಳ ಸಮಿತಿಯ ಕಳೆದ ವಾರದ ಆದೇಶದ ವಿರುದ್ಧ ಹೋರಾಟ ಮಾಡುವೆನೆಂದು ನ್ಯಾ.ಕರ್ಣನ್ ಹೇಳಿಕೆ ನೀಡಿದ ಬಳಿಕ ಸುಪ್ರೀಂಕೋರ್ಟ್‌ನ ಈ ಆದೇಶ ಹೊರಬಿದ್ದಿದೆ.
ಸುಪ್ರೀಂ ನ್ಯಾಯಮೂರ್ತಿಗಳ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ಹೂಡುವೆ: ನ್ಯಾ.ಕರ್ಣನ್
ಚೆನ್ನೈ, ಫೆ.15: ತನಗೆ ನ್ಯಾಯಾಂಗದ ಕೆಲಸವನ್ನು ನೀಡದಿರುವಂತೆ ಆದೇಶಿಸಿರುವ ಸುಪ್ರೀಂಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ವಿರುದ್ಧ ಪರಿಶಿಷ್ಟ ಜಾತಿ-ಪಂಗಡ ದೌರ್ಜನ್ಯ ತಡೆ ಕಾಯ್ದೆಯನ್ವಯ ಎಫ್‌ಐಆರ್ ದಾಖಲಿಸುವಂತೆ ಆದೇಶ ನೀಡಲಿದ್ದೇನೆಂದು ಮದ್ರಾಸ್ ಹೈಕೋರ್ಟ್‌ನ ವಿವಾದಿತ ನ್ಯಾಯಮೂರ್ತಿ ಸಿ.ಎಸ್.ಕರ್ಣನ್ ಹೇಳಿದ್ದಾರೆ.
ತನೆಗ ಕೇವಲ ನ್ಯಾಯಾಂಗದ ಕೆಲಸ ನೀಡುವುದನ್ನು ನಿಲ್ಲಿಸಲಾಗಿದೆ. ಆದರೆ, ತನ್ನ ನ್ಯಾಯಾಂಗ ಅಧಿಕಾರ ಈಗಲೂ ತನ್ನ ಬಳಿಯಿದೆ. ಸುಪ್ರೀಂಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ತಾನು ಚೆನ್ನೈ ನಗರ ಪೊಲೀಸ್ ಆಯುಕ್ತರಿಗೆ ಸ್ವಯಂ ಪ್ರೇರಿತ ನ್ಯಾಯಾಂಗ ಆದೇಶ ನೀಡಲಿದ್ದೇನೆಂದು ಅವರು ತಿಳಿಸಿದ್ದಾರೆ.
ಕೆಲವು ನ್ಯಾಯಮೂರ್ತಿಗಳ ವಿರುದ್ಧ ನಿರ್ದಿಷ್ಟ ಆರೋಪಗಳನ್ನು ಪುನರುಚ್ಚರಿಸಿದ ಕರ್ಣನ್, ತಾನು ಜಾತಿ ತಾರತಮ್ಯದ ಬಲಿ ಪಶುವಾಗಿದ್ದೇನೆ. ತನ್ನ ಜನ್ಮಜಾತ ಹಕ್ಕನ್ನು ರದ್ದುಪಡಿಸಿದರೆ ತಾನು, ಇಂತಹ ತಾರತಮ್ಯವಿಲ್ಲದ ದೇಶವೊಂದಕ್ಕೆ ವಲಸೆ ಹೋಗುತ್ತೇನೆ. ಸಂಬಂಧಿಸಿದ ಎಲ್ಲ ನ್ಯಾಯಮೂರ್ತಿಗಳನ್ನು ತಾನು ಸಂಸತ್ತಿಗೆ ಎಳೆಯುತ್ತೇನೆ. ಸಂಸತ್ತು ನಿರ್ಧರಿಸಲು ತಾನು ಅಮಾಯಕ. ಕೆಲವು ನ್ಯಾಯಮೂರ್ತಿಗಳ ಬಗ್ಗೆ ತಾನು ಸಂಶಯ ಹಾಗೂ ಆರೋಪಗಳನ್ನು ಎತ್ತಿದಾಗ, ಅವುಗಳನ್ನು ಪರಿಹರಿಸುವ ಬದಲು ತನ್ನ ವಿರುದ್ಧ ಆದೇಶ ಹೊರಡಿಸುತ್ತಾರೆಂದು ಆರೋಪಿಸಿದ್ದಾರೆ.