ಶೀಘ್ರವೇ ಐಷಾರಾಮಿ ಸ್ಮಾರ್ಟ್ ಬೋಗಿ

Update: 2016-02-15 18:07 GMT

ಹೊಸದಿಲ್ಲಿ, ಫೆ.15: ರೈಲು ಪ್ರಯಾಣ ಶೀಘ್ರವೇ ಇನ್ನಷ್ಟು ಆರಾಮದಾಯಕವಾಗಲಿದೆ. ಎಲ್ಲ ಹೊಸ ‘ಸ್ಮಾರ್ಟ್ ಬೋಗಿಗಳನ್ನು’ ಅಳವಡಿಸಲು ರೈಲ್ವೆ ಯೋಜನೆ ರೂಪಿಸಿದೆ. ಅವುಗಳಲ್ಲಿ ಪ್ರಯಾಣವು ಹೆಚ್ಚು ಸುಖಕರವಾಗಿರುವುದು ಮಾತ್ರವಲ್ಲದೆ, ಪ್ರಯಾಣ ಸಂಬಂಧಿ ಮಾಹಿತಿ ಪಡೆಯಲು ಸಮರ್ಥ ವಿಧಾನವು ಪ್ರಯಾಣಿಕರಿಗೆ ಲಭ್ಯವಾಗಿದೆ.

ಮೆತ್ತಗಿನ ಒಳಾಂಗಣವಿರುವ ಈ ‘ಸ್ಮಾರ್ಟ್ ಕೋಚ್’ಗಳಲ್ಲಿ ಜಿಪಿಎಸ್ ಆಧಾರಿತ ನಿದ್ದೆಯಿಂದೆಬ್ಬಿಸುವ ಅಲಾರಾಂ, ಎಲ್‌ಇಡಿ ಆಧಾರಿತ ರಿಸರ್ವೇಶನ್ ಚಾರ್ಟ್, ರಿಸರ್ವೇಶನ್ ಬೋಗಿಗಳಲ್ಲಿ ವೈ-ಫೈ ಸೌಲಭ್ಯದೊಂದಿಗೆ ಬರ್ತ್ ಸೂಚಿ ಮುಂತಾದ ವ್ಯವಸ್ಥೆಯಿರುತ್ತದೆ.
ವಿಮಾನಗಳಲ್ಲಿರುವಂತೆಯೇ, ಈ ಬೋಗಿಗಳು ಪ್ರಯಾಣಿಕ ಮಾಹಿತಿ ವ್ಯವಸ್ಥೆಯೊಂದಿಗೆ, ಹಗಲಿನ ವೇಳೆ ಧ್ವನಿ ವರ್ಧಕದ ಮೂಲಕ ಪ್ರಕಟನೆಗಳು ಹಾಗೂ ರೈಲಿನ ಕಂಡಕ್ಟರ್‌ನಿಂದ ಧ್ವನಿ ಸಂವಹನ ಆಧಾರಿತ ಸಹಾಯ ಲಭ್ಯವಿರುತ್ತದೆ.
ಹೆಚ್ಚಿನ ಅನುಕೂಲತೆಗಾಗಿ, ನೀರು, ಕಾಫಿ, ಟೀ ಹಾಗೂ ಇತರ ಪಾನೀಯಗಳಿಗಾಗಿ ಬೋಗಿಯೊಳಗೆಯೇ ವೆಂಡಿಂಗ್ ಯಂತ್ರವಿರುತ್ತದೆ.
ರೈಲ್ವೆಯ ವಿನ್ಯಾಸದಂತೆ ಸಿದ್ಧಪಡಿಸಲಾಗುವ ಈ ಸ್ಮಾರ್ಟ್ ಬೋಗಿಗಳಲ್ಲಿ ಪ್ರತಿ ಪ್ರಯಾಣಿಕನಿಗೆ ಲ್ಯಾಪ್‌ಟಾಪ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಸ್ವಯಂಚಾಲಿತ ಬಾಗಿಲುಗಳು, ಮೈಕ್ರೊ ಪ್ರೊಫೆಸರ್ ಆಧಾರಿತ ಹವಾನಿಯಂತ್ರಣ ಘಟಕ, ಸಂವೇದಿ ಟ್ಯಾಪ್ ಹಾಗೂ ಫ್ಲಶಿಂಗ್ ವ್ಯವಸ್ಥೆಯಿರುವ ಮಾಡ್ಯುಲರ್ ಬಯೊ-ಶೌಚಾಲಯಗಳು , ಸ್ವಯಂಚಾಲಿತ ಮಾರ್ಜಕ ಹಾಗೂ ಕೈ ಒಣಗಿಸುವ ಸಾಧನಗಳು, ಶೌಚಾಲಯ ಖಾಲಿಯಿದೆಯೇ ಇಲ್ಲವೇ ಎಂಬ ಸೂಚಕಗಳಿರುತ್ತವೆ.
ಈ ತಿಂಗಳು ಅಂತ್ಯದಲ್ಲಿ ಮಂಡಿಸಲಾಗುವ ರೈಲ್ವೆ ಬಜೆಟ್‌ನಲ್ಲಿ ಸ್ಮಾರ್ಟ್‌ಕೋಚ್ ಯೋಜನೆಯನ್ನು ಘೋಷಿಸುವ ಸಾಧ್ಯತೆಯಿದೆ.
ಸುರಕ್ಷೆ ಹಾಗೂ ಭದ್ರತೆಗಾಗಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ, ಸ್ವಯಂಚಾಲಿತ ಬೆಂಕಿ ಹಾಗೂ ಪತ್ತೆ ಸಾಧನ ಮತ್ತು ಅಗ್ನಿ ಶಾಮಕ ಸಾಧನಗಳಿರುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News