×
Ad

ಎನ್‌ಐಎ ತನಿಖೆ ಕೋರಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

Update: 2016-02-16 22:27 IST

ಹೊಸದಿಲ್ಲಿ, ಫೆ.16: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದಿದ್ದ ಭಾರತ ವಿರೋಧಿ ಚಟುವಟಿಕೆಗಳ ಆರೋಪದ ಕುರಿತು ರಾಷ್ಟ್ರೀಯ ತನಿಖೆ ಸಂಸ್ಥೆಯಿಂದ(ಎನ್‌ಐಎ) ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಮನವಿಯೊಂದನ್ನು ದಿಲ್ಲಿ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

ಮನವಿಯನ್ನು 'ಅಕಾಲಿಕ' ಎಂದು ಕರೆದ ನ್ಯಾಯಮೂರ್ತಿ ಮನಮೋಹನ್, ಪೊಲೀಸರು ಈ ವಿಷಯದ ಬಗ್ಗೆ ಈಗಾಗಲೇ ತನಿಖೆ ನಡೆಸುತ್ತಿದ್ದಾರೆ ಎಂದರು.
ರಂಜನಾ ಅಗ್ನಿಹೋತ್ರಿ ಎಂಬ ವಕೀಲೆ ಈ ಮನವಿಯನ್ನು ಸೋಮವಾರ ಸಲ್ಲಿಸಿದ್ದರು. ದಿಲ್ಲಿ ಪೊಲೀಸರು ಪ್ರಕರಣದ ಸರಿಯಾದ ತನಿಖೆ ನಡೆಸುತ್ತಿಲ್ಲ. ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಬೇಕೆಂದು ಅವರು ಆಗ್ರಹಿಸಿದ್ದರು.
ಘಟನೆಯು ಫೆ.9ರಂದಷ್ಟೇ ನಡೆದಿದೆ. ದಿಲ್ಲಿ ಪೊಲೀಸರು ಎಲ್ಲ ಅಯಾಮಗಳಿಂದ ತನಿಖೆ ನಡೆಸುವರೆಂಬ ವಿಶ್ವಾಸ ನ್ಯಾಯಾಲಯಕ್ಕಿದೆ. ಯಾವನೇ ಸರಕಾರಿ ಅಧಿಕಾರಿಗೆ ಮನವಿ ಸಲ್ಲಿಸದೆ ದೂರುದಾರೆ ನೇರವಾಗಿ ನ್ಯಾಯಾಲಯಕ್ಕೆ ಬಂದಿದ್ದಾರೆ. ಮನವಿಯು 'ಅಕಾಲಿಕವಾಗಿದೆ'. ತಾನು ಈ ಹಂತದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ದಿಲ್ಲಿ ಪೊಲೀಸರು ಅದರ ತನಿಖೆ ನಡೆಸಲಿ. ಇದು ಅತ್ಯಂತ ಬೇಗವಾಯಿತು ಎಂದು ಹೇಳಿದ ನ್ಯಾಯಾಲಯ, ಮನವಿಯನ್ನು ತಳ್ಳಿ ಹಾಕಿತು.
ಜೆಎನ್‌ಯು ಆವರಣದಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಲಾಗಿದೆ. ಪ್ರತಿಭಟನೆಗೆ ಯಾರು ಪ್ರಚೋದನೆ ನೀಡಿದರು ಹಾಗೂ ಅದರ ಹಿಂದೆ ಯಾರಿದ್ದರು ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ಕೇಂದ್ರ ಸರಕಾರದ ಪರ ವಕೀಲ ಅನಿಲ್ ಸೋನಿ ಹಾಗೂ ದಿಲ್ಲಿ ಪೊಲೀಸ್ ಪರ ವಕೀಲ ರಾಹುಲ್ ಮೆಹ್ರಾ ನ್ಯಾಯಾಲಯಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News