ಜೆಎನ್‌ಯು ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹ ಮೊಕದ್ದಮೆ - ಹಾರ್ವರ್ಡ್, ಕ್ಯಾಂಬ್ರಿಜ್ ಶಿಕ್ಷಕರ ಖಂಡನೆ
ಲಂಡನ್, ಫೆ. 16: ಕೊಲಂಬಿಯ, ಯೇಲ್, ಹಾರ್ವರ್ಡ್ ಮತ್ತು ಕ್ಯಾಂಬ್ರಿಜ್ ಮುಂತಾದ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳ 455 ಶಿಕ್ಷಣ ತಜ್ಞರು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು) ದ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಜಾಗತಿಕ ವಿಶ್ವವಿದ್ಯಾನಿಲಯಗಳ ಶಿಕ್ಷಣ ತಜ್ಞರು ಸಂಯುಕ್ತ ಹೇಳಿಕೆಯೊಂದನ್ನು ಹೊರಡಿಸಿದ್ದಾರೆ.
‘‘ಟೀಕಾ ಮನೋಭಾವ, ಪ್ರಜಾಸತ್ತಾತ್ಮಕ ಭಿನ್ನಾಭಿಪ್ರಾಯ, ವಿದ್ಯಾರ್ಥಿ ಚಳವಳಿ ಹಾಗೂ ವೈವಿಧ್ಯ ರಾಜಕೀಯ ವಿಚಾರಧಾರೆಗಳನ್ನು ಸ್ವೀಕರಿಸುವ ಪರಂಪರೆಯೊಂದನ್ನು ಜೆಎನ್‌ಯು ಹೊಂದಿದೆ. ಈ ಪರಂಪರೆಯನ್ನು ನಾಶಪಡಿಸುವ ಉದ್ದೇಶವನ್ನು ಹಾಲಿ ವ್ಯವಸ್ಥೆ ಹೊಂದಿದೆ. ಆದರೆ, ಇದು ಒಂದು ಭಾರತದ ಸಮಸ್ಯೆ ಮಾತ್ರವಲ್ಲ ಎನ್ನುವುದೂ ನಮಗೆ ತಿಳಿದಿದೆ’’ ಎಂದು ಹೇಳಿಕೆ ತಿಳಿಸಿದೆ.
‘‘ಟೀಕೆ, ಭಿನ್ನಮತ ಮತ್ತು ವಿಶ್ವವಿದ್ಯಾನಿಲಯಗಳ ಮೇಲಿನ ದಾಳಿಗಳು ಜಗತ್ತಿನಾದ್ಯಂತ ನಡೆಯುತ್ತಲೇ ಇವೆ ಹಾಗೂ ಅವುಗಳ ವಿರುದ್ಧ ಪ್ರತಿಭಟನೆಗಳನ್ನೂ ನಡೆಸಲಾಗುತ್ತಿದೆ. ಭಾರತ ಮತ್ತು ಜಾಗತಿಕ ವಿಶ್ವವಿದ್ಯಾನಿಲಯಗಳು ರೂಪಿಸಿದ ಟೀಕೆ ಮತ್ತು ಅಭಿವ್ಯಕ್ತಿ ಮನೋಭಾವಕ್ಕೂ ಮುಕ್ತ, ಸಹಿಷ್ಣು ಮತ್ತು ಪ್ರಜಾಸತ್ತಾತ್ಮಕ ಸಮಾಜಕ್ಕೂ ಬಿಡಿಸಲಾಗದ ನಂಟಿದೆ’’ ಎಂದಿದೆ.
‘‘ಜಗತ್ತಿನಾದ್ಯಂತದ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಂಶೋಧಕರಾದ ನಾವು ಜೆಎನ್‌ಯುನಲ್ಲಿ ಅನಾವರಣಗೊಳ್ಳುತ್ತಿರುವ ವಿದ್ಯಮಾನಗಳನ್ನು ಅತ್ಯಂತ ಕಳವಳದಿಂದ ಗಮನಿಸುತ್ತಿದ್ದೇವೆ ಹಾಗೂ ನಮ್ಮ ಸಹೋದ್ಯೋಗಿಗಳು (ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಬೋಧಕ ವರ್ಗ) ಅಕ್ರಮ ಬಂಧನ ಮತ್ತು ವಿದ್ಯಾರ್ಥಿಗಳ ನಿರಂಕುಶ ಅಮಾನತುಗಳ ವಿರುದ್ಧ ಪ್ರತಿಭಟಿಸುತ್ತಿರುವಾಗ ನಾವು ಮೂಕಪ್ರೇಕ್ಷಕರಾಗಿ ಕುಳಿತುಕೊಳ್ಳುವುದಿಲ್ಲ’’.
ಸಂಯುಕ್ತ ಹೇಳಿಕೆಗೆ ಸಹಿ ಹಾಕಿದವರಲ್ಲಿ ಕೆಲವರು ಜೆಎನ್‌ಯುನ ಹಳೆ ವಿದ್ಯಾರ್ಥಿಗಳಾಗಿದ್ದಾರೆ.
2001ರ ಸಂಸತ್ ದಾಳಿ ಪ್ರಕರಣದ ದೋಷಿ ಅಫ್ಝಲ್ ಗುರುವನ್ನು ಗಲ್ಲಿಗೇರಿಸಿದುದನ್ನು ವಿರೋಧಿಸಿ ಜೆಎನ್‌ಯುನಲ್ಲಿ ಏರ್ಪಡಿಸಲಾದ ಪ್ರತಿಭಟನಾ ಸಭೆಯೊಂದಕ್ಕೆ ಸಂಬಂಧಿಸಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾಂಞಯ್ಯ ಕುಮಾರ್‌ರನ್ನು ಕಳೆದ ವಾರ ದೆಶದ್ರೋಹ ಮತ್ತು ಕ್ರಿಮಿನಲ್ ಪಿತೂರಿ ಆರೋಪದಲ್ಲಿ ಬಂಧಿಸಲಾಗಿತ್ತು. ಆ ಸಭೆಯಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಲಾಗಿತ್ತು ಎನ್ನಲಾಗಿದೆ.
ಅವರ ಬಂಧನವನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತೀವ್ರವಾಗಿ ವಿರೋಧಿಸಿದ್ದಾರೆ ಹಾಗೂ ಬಿಜೆಪಿಯೇತರ ಪ್ರತಿಪಕ್ಷಗಳೂ ಈ ಬಂಧನವನ್ನು ಖಂಡಿಸಿವೆ.
ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದ ಶಿಕ್ಷಕರು ಬೆಂಬಲ ವ್ಯಕ್ತಪಡಿಸಿದ್ದಾರೆ ಹಾಗೂ ವಿಶ್ವವಿದ್ಯಾನಿಲಯದ ಆವರಣದಲ್ಲಿ ಪೊಲೀಸ್ ಕಾರ್ಯಾಚರಣೆಗೆ ಅವಕಾಶ ನೀಡಿದ ವಿಶ್ವವಿದ್ಯಾನಿಲಯ ಆಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.