ವಾಸ್ತವದಿಂದ ದೂರ ಸರಿದ ಭದ್ರತಾ ಮಂಡಳಿ: ಭಾರತ ಟೀಕೆ
ವಿಶ್ವಸಂಸ್ಥೆ, ಫೆ.16: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಈಗಿನ ಸ್ವರೂಪ ಹಾಗೂ ಕೆಲಸದ ರೀತಿಯ ಬಗ್ಗೆ ವಾಗ್ದಾಳಿ ನಡೆಸಿರುವ ಭಾರತ 15 ಸದಸ್ಯ ಬಲದ ಬಲಿಷ್ಠ ಜಾಗತಿಕ ಮಂಡಳಿಯು ‘ವಾಸ್ತವದಿಂದ ದೂರ ಸರಿದಿದೆ’ ಹಾಗೂ ಓಬಿರಾಯನ ಕಾಲವನ್ನು ಪ್ರತಿನಿಧಿಸುತ್ತಿದೆ. ಅದರ ಸುಧಾರಣೆ ಅತ್ಯಗತ್ಯವೆಂದು ಹೇಳಿದೆ.
ಭದ್ರತಾ ಸಮಿತಿಯು ತನ್ನ ಮನೆಯೇ ಸರಿಯಿಲ್ಲದಿರುವಾಗ, ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ಪ್ರಜಾಪ್ರಭುತ್ವ ಹಾಗೂ ಕಾನೂನು ಆಡಳಿತದ ಸ್ಥಾಪನೆಗಾಗಿ ಕೆಲಸ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಅದರ ಈಗಿನ ಸ್ವರೂಪವು ವಾಸ್ತವಕ್ಕೆ ದೂರವಾಗಿದೆ ಹಾಗೂ ಓಬಿರಾಯನ ಕಾಲವನ್ನು ಪ್ರತಿನಿಧಿಸುತ್ತಿದೆಯೆಂದು ವಿಶ್ವಸಂಸ್ಥೆಯ ಭಾರತೀಯ ರಾಯಭಾರಿ ಸೈಯದ್ ಅಕ್ಬರುದ್ದೀನ್ ಟೀಕಿಸಿದ್ದಾರೆ. ಅವು ತನ್ನ ಅಧಿಕೃತತೆಯನ್ನು ಮರಳಿ ಪಡೆಯಬೇಕಾದರೆ ಸುಧಾರಣೆಯ ಹೊರತು ಬೇರೆ ಮಾರ್ಗವಿಲ್ಲವೆಂದು ಅವರು ಹೇಳಿದ್ದಾರೆ.
‘ಅಂತಾರಾಷ್ಟ್ರೀಯ ಶಾಂತಿ ಹಾಗೂ ಭದ್ರತೆ ಕಾಪಾಡುವ ಪ್ರಧಾನ ಅಂಶವಾಗಿ ವಿಶ್ವಸಂಸ್ಥೆಯ ಸನದಿನ ಸಿದ್ಧಾಂತ ಹಾಗೂ ಉದ್ದೇಶವನ್ನು ಗೌರವಿಸಿ’ ಎಂಬ ವಿಷಯದ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ಮುಕ್ತ ಚರ್ಚೆಯೊಂದರ ವೇಳೆ ಅಕ್ಬರುದ್ದೀನ್‌ರ ಈ ತೀಕ್ಷ್ಣ ಟೀಕೆ ಹೊರ ಬಿದ್ದಿದೆ.
ಮೂಲಭೂತ ಬದಲಾವಣೆಗಳನ್ನು ಮಾಡಲು ಪ್ರಳಯಾಂತಕ ಬಿಕ್ಕಟ್ಟು ಒದಗ ಬೇಕಾಗಿಲ್ಲವೆಂಬುದು ತಮ್ಮ ಆಶಯವಾಗಿದೆ. ಮಂಡಳಿಯನ್ನು ಸುಧಾರಿಸುವ ಭಾರೀ ಅಗತ್ಯ ಈ ಹಿಂದೆ ಎಂದೂ ಬಂದಿರಲಿಲ್ಲ. ಮಂಡಳಿಯ ಸರ್ವ ಸಾಮರ್ಥ್ಯ ಪ್ರಕಟವಾಗಬೇಕು, ಉದ್ದೇಶಕ್ಕೆ ನಿಜವಾದ ಗೌರವ ನೀಡಬೇಕು ಹಾಗೂ ವಿಶ್ವಸಂಸ್ಥೆಯ ಸನದಿನ ಸಿದ್ಧಾಂತಗಳಿಗೆ ವಾಸ್ತವ ಗೌರವ ದೊರೆಯಬೇಕೆಂದು ಅಕ್ಬರುದ್ದೀನ್ ಹೇಳಿದ್ದಾರೆ.