×
Ad

ಚೀನಾದಲ್ಲಿ ಮಹಿಳೆಯರಿಗೆ ಋತುಸ್ರಾವಕ್ಕೆ ರಜೆ, ಮೊಲೆಯೂಡಿಸಲು ವಿರಾಮ

Update: 2016-02-17 15:36 IST

ಅನ್‌ಹೂಯಿ: ಮೈನಸ್ (ಋತುಸ್ರಾವ) ದಿನಗಳಲ್ಲಿ ಮಹಿಳೆಯರಿಗಾಗುವ ತೊಂದರೆಯನ್ನು ಪರಿಗಣಿಸಿ ಅವರಿಗೆ ಆ ದಿವಸಗಳಲ್ಲಿ ರಜೆ ನೀಡಲು ಚೆನ್ನೈ ಅನ್‌ಹೂಯಿ ಪ್ರೋವಿನ್ಸ್ ತೀರ್ಮಾನಿಸಿದೆ. ಮಾರ್ಚ್ ಒಂದರಿಂದ ಈ ಕಾನೂನು ಜಾರಿಗೊಳ್ಳಲಿದೆ ಎಂದು ಅನ್‌ಹೂಯಿಯ ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ. ನೋವುಕಾರಕ ಋತುಸ್ರಾವವನ್ನು ಅನುಭವಿಸುವ ಮಹಿಳೆಯರಿಗೆ ತಿಂಗಳಲ್ಲಿ ಒಂದೆರಡು ರಜೆ ನೀಡಲು ಅನ್‌ಹೂಯಿ ಪ್ರಾಂತ ತೀರ್ಮಾನಿಸಿದೆ ಎಂದು ಪೀಪಲ್ಸ್ ಡೈಲಿ ಆನ್‌ಲೈನ್ ವರದಿ ಮಾಡಿದೆ.

ಇದಲ್ಲದೆ ತಾಯಂದಿರಿಗೆ ಮೊಲೆಯೂಡಿಸಲು ಒಂದು ಗಂಟೆ ಬ್ರೇಕ್ (ವಿರಾಮ) ನೀಡಲು ತೀರ್ಮಾನಿಸಲಾಗಿದೆ. ಜನವರಿಯಲ್ಲಿ ಅನ್‌ಹೂಯಿ ಪ್ರಾಂತ ಸರಕಾರದ 67ನೆ ವಾರ್ಷಿಕ ಸಭೆಯಲ್ಲಿ ಹೊಸ ಕಾನೂನು ಜಾರಿಗೊಳಿಸಲು ನಿರ್ಧರಿಸಲಾಗಿದೆ.

ಪ್ರಾಂತ ಮಹಿಳಾ ಉದ್ಯೋಗಿಗಳ ಸಂರಕ್ಷಣೆ ನಿಟ್ಟಿನಲ್ಲಿ ಹೊಸ ಕಾನೂನನ್ನು ಈ ವಾರ್ಷಿಕ ಸಭೆಯಲ್ಲಿ ಪಾಸು ಮಾಡಲಾಯಿತು. ಇದಲ್ಲದೆ ಹೆರಿಗೆ ರಜೆಯನ್ನೂ ಒಂದುವರ್ಷಗಿಂತ ಕಡಿಮೆ ಪ್ರಾಯದ ಮಕ್ಕಳ ತಾಯಂದಿರಿಗೆ ದಿನದಲ್ಲಿ ಒಂದು ಗಂಟೆ ವಿರಾಮವನ್ನೂ ನೀಡಲು ಸಭೆಯಲ್ಲಿ ಸಹಮತ ವ್ಯಕ್ತವಾಗಿದೆ .

ಅನ್‌ಹೂಯಿಯಲ್ಲದೆ ಹುಬೈ, ಹೈನಾನ್ ಪ್ರಾಂತಗಳಲ್ಲಿಯೂ ಮೊದಲೇ ಋತುಸ್ರಾವ ರಜೆಯನ್ನು ನೀಡಲಾಗಿತ್ತಾದರೂ ಅದನ್ನು ಉಪಯೋಗಿಸುವವರ ಸಂಖ್ಯೆ ತೀರಾ ಕಡಿಮೆಯಿದೆ. ಹೈನಾನ್ ಪ್ರಾಂತ ಈ ರಜೆಯನ್ನು ಕಡ್ಡಾಯಗೊಳಿಸಿದ ನಂತರ ಹೆಚ್ಚಿನ ಕಂಪೆನಿಗಳು ಇದನ್ನು ತಮ್ಮ ನಿಯಮದಲ್ಲಿ ಸೇರಿಸಿಕೊಂಡಿದೆ. ಗ್ಯಾಂಗ್ಟಂಗ್ ಪ್ರಾಂತದಲ್ಲಿ ಈ ಕುರಿತು ಕ್ರಮ ಕಳೆದ ಡಿಸೆಂಬರ್‌ನಲ್ಲಿ ಆರಂಭಿಸಲಾಗಿದೆ. ಆದರೆ ಇದು ಕಾನೂನು ರೂಪಕ್ಕೆ ಬರಲಿರುವ ದಿನಾಂಕವನ್ನು ನಿರ್ಧರಿಸಲಾಗಿಲ್ಲ. ಅಲ್ಲೀಗ ಇಂತಹ ಕಾನೂನುಗಳು ಬೇಕೆಬೇಡವೇ ಎಂದು ಬಿರುಸಿನ ಚರ್ಚೆಗಳು ನಡೆಯುತ್ತಿವೆ.

ಇಂತಹ ರಜೆಗಳನ್ನು ಮಹಿಳೆಯರು ತೆಗೆಯುವುದೇ ಇಲ್ಲ ಎಂದು ಕಳೆದ ವರ್ಷ ನಡೆಸಲಾದ ಒಂದು ಅಧ್ಯಯನದಲ್ಲಿ ಬಹಿರಂಗವಾಗಿತ್ತು. ತಮ್ಮ ಖಾಸಗಿ ವಿಚಾರ ಇನ್ನೊಬ್ಬರ ಮುಂದೆ ಬಹಿರಂಗಗೊಳಿಸಲು ಅಲ್ಲಿನ ಮಹಿಳೆಯರು ಸಿದ್ಧರಾಗಿಲ್ಲ. ಇಂತಹ ಕಾನೂನುಗಳು ಕಡ್ಡಾಯವಾಗಿ ಜಾರಿಗೊಳಿಸಬೇಕೆಂದಾದರೆ ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಳ್ಳುವುದು ತುಂಬ ದುಬಾರಿಯೆನಿಸಲಿದೆ ಎಂದು ಅಧ್ಯಯನದ ವರದಿ ಸೂಚಿಸಿದೆ.ಈ ರಜೆಯನ್ನು ಮಹಿಳೆಯರಿಗೆ ನೀಡದ ಸಂಸ್ಥೆಗಳು ಅನ್‌ಹೂಯಿಯಲ್ಲಿ ದಂಡ ತೆರಬೇಕಾಗುವುದು ಎಂದು ಮಾಧ್ಯಮಗಳಲ್ಲಿ ವರದಿಯಾಗಿವೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯ ವ್ಯಾಪಕ ಚರ್ಚೆಗೊಳಗಾಗಿದೆ. ಕೆಲವರು ಇದನ್ನು ವಿರೋಧಿಸಿದ್ದಾರೆ ಇನ್ನುಕೆಲವರು ಮಹಿಳಾ ಹಕ್ಕು ಸಂರಕ್ಷಣೆ ಎಂದಿದ್ದು ಬೆಂಬಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News