ದ್ವಿತೀಯ ಟೆಸ್ಟ್: ಕಿವೀಸ್ ವೇಗಿ ಬ್ರಾಸ್‌ವೆಲ್ ಅಲಭ್ಯ
ವೆಲ್ಲಿಂಗ್ಟನ್, ಫೆ.17: ಭುಜದ ನೋವಿನಿಂದ ಬಳಲುತ್ತಿರುವ ನ್ಯೂಝಿಲೆಂಡ್‌ನ ವೇಗದ ಬೌಲರ್ ಡೌಗ್ ಬ್ರಾಸ್‌ವೆಲ್ ಆಸ್ಟ್ರೇಲಿಯ ವಿರುದ್ಧದ ಎರಡನೆ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.
ಈಗಾಗಲೇ ಬ್ಯಾಟ್ಸ್‌ಮನ್ ರಾಸ್ ಟೇಲರ್ ಹಾಗೂ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಸೇವೆಯಿಂದ ವಂಚಿತವಾಗಿರುವ ಕಿವೀಸ್,ಬ್ರಾಸ್‌ವೆಲ್ ಅಲಭ್ಯತೆಯಿಂದಾಗಿ ಭಾರೀ ಹಿನ್ನಡೆ ಅನುಭವಿಸಿದೆ.
‘‘ಈ ಋತುವಿನಲ್ಲಿ ಬ್ರಾಸ್‌ವೆಲ್ ತಂಡದ ಪರ ಸ್ಥಿರ ಪ್ರದರ್ಶನ ನೀಡುತ್ತಿದ್ದರು. ಆದರೆ, ಅವರೀಗ ಆಸ್ಟ್ರೇಲಿಯ ವಿರುದ್ಧ ಎರಡನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿಯುತ್ತಿರುವುದು ಬೇಸರದ ಸಂಗತಿ. ಶನಿವಾರ ಕ್ರೈಸ್ಟ್‌ಚರ್ಚ್‌ನಲ್ಲಿ 2ನೆ ಟೆಸ್ಟ್ ಆರಂಭವಾಗುವ ಮೊದಲೇ ಬ್ರಾಸ್‌ವೆಲ್ ಬದಲಿ ಆಟಗಾರನನ್ನು ಆಯ್ಕೆ ಮಾಡಲಾಗುವುದು’’ ಎಂದು ಕೋಚ್ ಮೈಕ್ ಹೆಸ್ಸನ್ ಹೇಳಿದ್ದಾರೆ.
ನ್ಯೂಝಿಲೆಂಡ್ ತಂಡ ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 52 ರನ್‌ಗಳ ಅಂತರದಿಂದ ಸೋತಿದೆ. ಕಿವೀಸ್ 19 ವರ್ಷಗಳ ನಂತರ ತವರು ನೆಲದಲ್ಲಿ ಹೀನಾಯವಾಗಿ ಸೋತಿತ್ತು. ಆಸ್ಟ್ರೇಲಿಯ ತಂಡ ಎರಡನೆ ಟೆಸ್ಟ್ ಪಂದ್ಯದಲ್ಲೂ ಗೆಲುವು ಸಾಧಿಸಿದರೆ, ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೆ ಏರಲಿದೆ.