×
Ad

2016ರ ಏಷ್ಯಾಕಪ್‌ನಲ್ಲಿ ಎಲ್ಲವೂ ಚೇಂಜ್.. !

Update: 2016-02-17 23:54 IST

ಹೊಸದಿಲ್ಲಿ, ಫೆ.17: ಬಾಂಗ್ಲಾದೇಶದಲ್ಲಿ ಫೆ.24ರಂದು ಆರಂಭಗೊಳ್ಳಲಿರುವ ಈ ಆವೃತ್ತಿಯ ಏಷ್ಯಕಪ್‌ನಲ್ಲಿ ಎಲ್ಲವೂ ಬದಲಾವಣೆಯಾಗಿದೆ. 50 ಓವರ್‌ಗಳ ಬದಲಿಗೆ 20 ಓವರ್‌ಗಳ ಕ್ರಿಕೆಟ್ ಆಗಿ ಮಾರ್ಪಟ್ಟಿದೆ. ಮೊದಲ ಬಾರಿ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಆಗಿರುವ ಏಷ್ಯಾಕಪ್‌ನ ಅರ್ಹತಾ ಸುತ್ತಿನ ಪಂದ್ಯಗಳು ಫೆ.19ರಿಂದ ಆರಂಭಗೊಳ್ಳಲಿದೆ. ಫೆ.24ರಿಂದ ಮಾರ್ಚ್ 6ರ ತನಕ ಟೂರ್ನಮೆಂಟ್ ನಡೆಯಲಿದ್ದು, ಏಷ್ಯಾದ ಕ್ರಿಕೆಟ್ ತಂಡಗಳಿಗೆ ಮುಂದಿನ ವಿಶ್ವಕಪ್‌ನ ತಯಾರಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ.

ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಅಫ್ಘಾನಿಸ್ತಾನ, ಯುಎಇ, ಹಾಂಕಾಂಗ್, ಮತ್ತು ಒಮನ್ ತಂಡಗಳು ಹಣಾಹಣಿ ನಡೆಸಲಿವೆ.ವಿಜೇತ ತಂಡ ಅಂತಿಮ ಹಂತಕ್ಕೆ ಪ್ರವೇಶ ಪಡೆಯಲಿದೆ.

   ಆ್ಯಂಜೆಲೊ ಮ್ಯಾಥ್ಯೂಸ್ ನಾಯಕತ್ವದ ಶ್ರೀಲಂಕಾ ತಂಡ 2014ರಲ್ಲಿ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು. ಐದು ಬಾರಿ ಪ್ರಶಸ್ತಿ ಜಯಿಸಿದ ಭಾರತದ ಸಾಧನೆಯನ್ನು ಸರಿಗಟ್ಟಿತ್ತು. 1984ರಲ್ಲಿ ಮೊದಲ ಏಷ್ಯಾಕಪ್ ಯುಎಇಯಲ್ಲಿ ನಡೆದಿತ್ತು. ಭಾರತ ಚೊಚ್ಚಲ ಚಾಂಪಿಯನ್. ತಲಾ ಐದು ಬಾರಿ ಪ್ರಶಸ್ತಿ ಜಯಿಸಿರುವ ಭಾರತ ಮತ್ತು ಹಾಲಿ ಚಾಂಪಿಯನ್ ಶ್ರೀಲಂಕಾ ಯಶಸ್ವಿ ತಂಡಗಳಾಗಿವೆ. ಪಾಕಿಸ್ತಾನ ಎರಡು ಬಾರಿ ಪ್ರಶಸ್ತಿ ಗೆದ್ದುಕೊಂಡಿತ್ತು. ಬಾಂಗ್ಲಾದೇಶ 2012ರಲ್ಲಿ ಫೈನಲ್ ಪ್ರವೇಶಿಸಿತ್ತು. ಇದು ಬಾಂಗ್ಲಾದ ಈ ವರೆಗಿನ ದೊಡ್ಡ ಸಾಧನೆಯಾಗಿದೆ.

 ಈ ಆವೃತ್ತಿಯ ಎಲ್ಲ ಪಂದ್ಯಗಳು ಮೀರ್ಪುರದ ಶೇರ್-ಎ-ಬಾಂಗ್ಲಾ ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತ ಈ ತನಕ 43 ಪಂದ್ಯಗಳನ್ನು ಆಡಿದೆ. 26ರಲ್ಲಿ ಜಯ ಗಳಿಸಿದೆ. 16 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ರದ್ದಾಗಿದೆ.

ಶ್ರೀಲಂಕಾದ ಸನತ್ ಜಯಸೂರ್ಯ(1,220) ಏಷ್ಯಕಪ್‌ನಲ್ಲಿ ಗರಿಷ್ಠ ರನ್ ದಾಖಲಿಸಿದವರು. ಕುಮಾರ ಸಂಗಕ್ಕರ (1,075) ಎರಡನೆ ಮತ್ತು ಸಚಿನ್ ತೆಂಡುಲ್ಕರ್(971) ಮೂರನೆ ಸ್ಥಾನ ಪಡೆದಿದ್ದಾರೆ.

 ಮಹೇಂದ್ರ ಸಿಂಗ್ ಧೋನಿ 13 ಪಂದ್ಯಗಳಲ್ಲಿ ಭಾರತದ ನಾಯಕತ್ವ ವಹಿಸಿಕೊಂಡಿದ್ದಾರೆ. ಶ್ರೀಲಂಕಾದ ಅರ್ಜುನ್ ರಣತುಂಗ ಮತ್ತು ಮಹೇಂದ್ರ ಸಿಂಗ್ ಧೋನಿ ಯಶಸ್ವಿ ನಾಯಕರು. ಅವರ ನಾಯಕತ್ವದಲ್ಲಿ ಆಡಲಾದ ಪಂದ್ಯಗಳಲ್ಲಿ ತಲಾ 9ರಲ್ಲಿ ಉಭಯ ತಂಡಗಳು ಜಯ ಗಳಿಸಿವೆ. ನಾಲ್ಕರಲ್ಲಿ ಸೋಲು ಅನುಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News