ಕೇರಳ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಜೆಎನ್‌ಯು ವಿವಾದ

Update: 2016-02-18 18:20 GMT

ತಿರುವನಂತಪುರ, ಫೆ.18: ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಬಂಧನ ಮತ್ತು ಇತರ ಸಂಬಂಧಿತ ಬೆಳವಣಿಗೆಗಳು ಗುರುವಾರ ಕೇರಳ ವಿಧಾನ ಸಭೆಯಲ್ಲಿ ಪ್ರತಿಧ್ವನಿಸಿದವು. ಆರೆಸ್ಸೆಸ್ ಕಾರ್ಯಕರ್ತರೆನ್ನಲಾದ ಗುಂಪಿನಿಂದ ಪಕ್ಷದ ಕಾರ್ಯಕರ್ತನೋರ್ವನ ಹತ್ಯೆಯ ವಿರುದ್ಧ ನಿಲುವಳಿ ಸೂಚನೆಗೆ ಅನುಮತಿ ಕೋರಿದ ಸಂದರ್ಭ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಈ ವಿಷಯಗಳನ್ನೆತ್ತಿತು.
ಪ್ರಧಾನಿ ನರೇಂದ್ರ ಮೋದಿಯವರ ಸರಕಾರವು ಅಧಿಕಾರಕ್ಕೆ ಬಂದ ನಂತರ ಆರೆಸ್ಸೆಸ್ ಮತ್ತು ಬಜರಂಗ ದಳ ಕಾರ್ಯಕರ್ತರಿಗೆ ದೇಶದಲ್ಲಿ ಯಾವುದೇ ಅಂಕೆಯಿಲ್ಲದಂತಾಗಿದೆ ಎಂದು ಹಿರಿಯ ಸಿಪಿಎಂ ನಾಯಕ ಎಸ್.ಶರ್ಮಾ ಹೇಳಿದರು.
ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರಿಗೆ ಜೀವ ಬೆದರಿಕೆ ಬಂದಿದೆ. ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಕೂಡ ಈ ಕಾರ್ಯಕರ್ತರ ಕೋಪಕ್ಕೆ ಗುರಿಯಾಗಿದ್ದಾರೆ ಎಂದ ಅವರು,ರಾಜ್ಯದಲ್ಲಿಯ ಯುಡಿಎಫ್ ಸರಕಾರವು ಆರೆಸ್ಸೆಸ್ ಹುಟ್ಟು ಹಾಕಿರುವ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದರು.
ಅಲಪ್ಪುಳ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದ ಸಿಪಿಎಂ ಕಾರ್ಯಕರ್ತ ಶಿಬು ಹತ್ಯೆಗೆ ಸಂಬಂಧಿಸಿದಂತೆ ನಿಲುವಳಿ ನೋಟಿಸನ್ನು ನೀಡಿದ್ದ ಎ.ಎಂ.ಆರಿಫ್(ಸಿಪಿಎಂ) ಅವರು, ಈ ಹತ್ಯೆಯ ಹಿಂದೆ ಆರೆಸ್ಸೆಸ್ ಕಾರ್ಯಕರ್ತರು ಇರುವುದು ಸ್ಪಷ್ಟವಾಗಿದ್ದರೂ ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹೊಡೆಯುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News