ಅಘೋಷಿತ ತುರ್ತುಪರಿಸ್ಥಿತಿ ವಿರುದ್ಧ ಜಾತ್ಯತೀತ ಶಕ್ತಿಗಳು ಒಂದಾಗಲಿ: ಶಾಫಿ ಸಅದಿ

Update: 2016-02-18 18:52 GMT

ಬೆಂಗಳೂರು, ಫೆ.18: ಜೆಎನ್‌ಯು ವಿದ್ಯಾರ್ಥಿ ಹೋರಾಟಕ್ಕೆ ಸಂಬಂಧಿಸಿದ ಬೆಳವಣಿಗೆಯು ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ನಿರ್ಮಿಸಿದೆ. ಕೋರ್ಟ್ ಆವರಣದಲ್ಲೇ ನ್ಯಾಯ ಪಾಲಕರೆನಿಸಿಕೊಂಡವರೇ ಕಾನೂನು ಕೈಗೆತ್ತಿಕೊಂಡಿರುವುದು ದೇಶದ ಪ್ರಜಾಸತ್ತಾತ್ಮಕ, ಜಾತ್ಯತೀತ ಸಂವಿಧಾನದ ಮೇಲೆ ಪ್ರಹಾರ ಮಾಡಿದಂತಾಗಿದೆ. ಇದರ ವಿರುದ್ಧ ಜಾತ್ಯತೀತ ಶಕ್ತಿಗಳು ಒಟ್ಟಾಗಿ ಹೋರಾಡಬೇಕಾದ ಅಗತ್ಯ ಇದೆ ಎಂದು ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ರಾಜ್ಯಾಧ್ಯಕ್ಷ, ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಎನ್.ಕೆ. ಮುಹಮ್ಮದ್ ಶಾಫಿ ಸಅದಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜೆಎನ್‌ಯು ವಿದ್ಯಾರ್ಥಿಗಳ ಹೋರಾಟವನ್ನು ದೇಶದ್ರೋಹವೆಂಬ ಆರೋಪ ಹೊರಿಸಿ ಹತ್ತಿಕ್ಕುವ ಯತ್ನವನ್ನು ಆಡಳಿತರೂಢರು ಮಾಡುತ್ತಿರುವುದು ಖಂಡನೀಯ. ಗಾಂಧೀಜಿ ಯಿಂದ ಎಂ.ಎಂ.ಕಲಬುರ್ಗಿ ತನಕ ಹಲವರನ್ನು ಹತ್ಯೆಗೈದಿರುವ ಫ್ಯಾಸಿಸ್ಟ್ ಮನಸ್ಥಿತಿಗಳೇ ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ಮೇಲೆ ದಾಂಧಲೆ ನಡೆಸಿದೆ. ಜೆಎನ್‌ಯು ವಿದ್ಯಾರ್ಥಿಗಳ ದೇಶಪ್ರೇಮದ ಬಗ್ಗೆ ಸಂದೇಹ ವ್ಯಕ್ತಪಡಿಸುವವರು ಗಾಂಧಿ ಹತ್ಯೆ, ಬಾಬರಿ ಮಸೀದಿ ಧ್ವಂಸ ಮುಂತಾದ ದೇಶದ್ರೋಹಿ ಕೃತ್ಯಗಳಿಗಾಗಿ ಮೊದಲು ದೇಶದ ಕ್ಷಮೆ ಯಾಚಿಸಲಿ ಎಂದು ಅವರು ಆಗ್ರಹಿಸಿದ್ದಾರೆ. ಜೆಎನ್‌ಯು ಪ್ರಕರಣದಲ್ಲಿ ಅನ್ಯಾಯವಾಗಿ ಬಂಧಿತರಾಗಿರುವ ವಿದ್ಯಾರ್ಥಿಗಳು ಮತ್ತು ನಾಯಕರ ಬಿಡುಗಡೆ ಮಾಡಬೇಕು. ಅವರ ವಿರುದ್ಧದ ಕೇಸ್‌ಗಳನ್ನು ಹಿಂಪಡೆಯಬೇಕು. ದೇಶದ್ರೋಹದ ಘೋಷಣೆ ಕೂಗಿದ ನಿಜವಾದ ಆರೋಪಿಗಳ ಬಂಧನವಾಗಲಿ ಎಂದು ಶಾಫಿ ಸಅದಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News