ಮೀಸಲಾತಿ: ಜಾಟ್ ಪ್ರತಿಭಟನೆಗೆ ಮೂವರು ಬಲಿ
ರೋಹ್ಟಕ್,ಫೆ.19: ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿಗೆ ಆಗ್ರಹಿಸಿ ಜಾಟ್ ಸಮುದಾಯದ ಹೋರಾಟ ಶುಕ್ರವಾರ ಹಿಂಸೆಗೆ ತಿರುಗಿದ್ದು, ರೋಹ್ಟಕ್ ನಗರದಲ್ಲಿ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಮೂವರು ಮೃತಪಟ್ಟಿದ್ದಾರೆ. ಇತರ 18 ಜನರು ಗಾಯಗೊಂಡಿದ್ದಾರೆ. ಹರ್ಯಾಣದ 2 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಕಂಡಲ್ಲಿ ಗುಂಡಿಕ್ಕಲು ಆದೇಶಿಸಲಾಗಿದೆ. ಇದೇ ಸಂದರ್ಭದಲ್ಲಿ ಜಾಟ್ ಮತ್ತು ಇತರ ನಾಲ್ಕು ಜಾತಿಗಳನ್ನು ಹಿಂದುಳಿದ ಸಮುದಾಯಗಳೆಂದು ಘೋಷಿಸುವ ಮಸೂದೆಯೊಂದನ್ನು ತರಲು ಹರ್ಯಾಣ ಸರಕಾರವು ಒಪ್ಪಿಕೊಂಡಿದೆ.
ಸರ್ವಪಕ್ಷ ಸಭೆಯ ಬಳಿಕ ಸುದ್ದಿಗಾರರೊದಿಗೆ ಮಾತನಾಡಿದ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು, ಜಾಟ್ ನಾಯಕರು ಮತ್ತು ಎಲ್ಲ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಸಮಾಲೋಚನೆಗಳ ಬಳಿಕ ಕರಡು ಮಸೂದೆಯನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ರೋಹ್ಟಕ್‌ನಲ್ಲಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಒಂದು ಸಾವಿರಕ್ಕೂ ಅಧಿಕ ಪೊಲೀಸರು ಹೆಣಗಾಡಿದರು. ಸೆಕ್ಟರ್ 14ರಲ್ಲಿರುವ ಹಣಕಾಸು ಸಚಿವ ಕ್ಯಾ.ಅಭಿಮನ್ಯು ಅವರ ನಿವಾಸಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು ಐಜಿಪಿಯ ನಿವಾಸದ ಮೇಲೂ ದಾಳಿಯನ್ನು ನಡೆಸಿದರು. ಮಾಲ್‌ವೊಂದಕ್ಕೆ ಹಾನಿಯನ್ನುಂಟು ಮಾಡಿದ ಅವರು ಪೊಲೀಸರ ಮೇಲೆ ಗುಂಡನ್ನೂ ಹಾರಿಸಿದ್ದಾರೆನ್ನಲಾಗಿದ್ದು, ಓರ್ವ ಅಧಿಕಾರಿ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಹರ್ಯಾಣ ಮತ್ತು ಪಂಜಾಬ್ ರಾಜ್ಯಗಳ ರಾಜಧಾನಿಯಾಗಿರುವ ಚಂಡೀಗಡದಲ್ಲಿ ಸೇನೆಗೆ ಕರೆನೀಡಲಾಗಿತ್ತು. ಝಜ್ಜಾರ್, ಸೋನೆಪತ್,ಹಿಸ್ಸಾರ್,ಜಿಂದ್,ಪಾನಿಪತ್,ಭಿವಾನಿ ಮತ್ತು ಕೈಥಾ ಜಿಲ್ಲೆಗಳಲ್ಲಿಯೂ ಪ್ರತಿಭಟನೆ ತೀವ್ರಗೊಂಡಿತ್ತು.
ಪ್ರತಿಭಟನೆಯಿಂದಾಗಿ ದಿಲ್ಲಿಯಿಂದ ಹರ್ಯಾಣ,ಪಂಜಾಬ್, ರಾಜಸ್ಥಾನ ಮತ್ತು ಜಮ್ಮುಗಳಿಗೆ ತೆರಳುತ್ತಿದ್ದ ಹಲವಾರು ರೈಲುಗಳ ಸಂಚಾರಕ್ಕೆ ವ್ಯತ್ಯಯವುಂಟಾಗಿತ್ತು. ಆರು ದಿನಗಳ ಕಾಲ ನಡೆದ ಪ್ರತಿಭಟನೆಯಿಂದಾಗಿ 21 ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಸಿಖ್ ಸಮುದಾಯವನ್ನು ಗುರಿಯಾಗಿಸಿಕೊಂಡ ಎಸ್‌ಎಂಎಸ್‌ಗಳು ಹರಿದಾಡತೊಡಗಿದ್ದರಿಂದ ರೋಹ್ಟಕ್, ಸೋನೆಪತ್ ಮತ್ತು ಪಾನಿಪತ್‌ಗಳಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆಗಳನ್ನು ಪೊಲೀಸರು ಸ್ಥಗಿತಗೊಳಿಸಿದ್ದರು.