ಸಲಹೆಗಾರರಾಗಿ ರಿಚರ್ಡ್ಸ್ ನೇಮಕಕ್ಕೆ ಪಿಸಿಬಿ ಒಲವು
ಕರಾಚಿ, ಫೆ.19: ಮುಂಬರುವ ಏಷ್ಯಾಕಪ್ ಹಾಗೂ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪಾಕ್ ಕ್ರಿಕೆಟ್ ತಂಡದ ಸಲಹೆಗಾರರಾಗಿ ವೆಸ್ಟ್‌ಇಂಡೀಸ್‌ನ ಬ್ಯಾಟಿಂಗ್ ದಂತಕತೆ ಸರ್ ವಿವಿಯನ್ ರಿಚರ್ಡ್ಸ್‌ರನ್ನು ನೇಮಕ ಮಾಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಆಸಕ್ತಿ ತೋರಿದ್ದು, ಅವರೊಂದಿಗೆ ಮಾತುಕತೆ ನಡೆಸಲು ಮುಂದಾಗಿದೆ.
ಮುಂಬರುವ ಎರಡು ಪ್ರಮುಖ ಟ್ವೆಂಟಿ-20 ಟೂರ್ನಿಗಳಲ್ಲಿ ರಿಚರ್ಡ್ಸ್‌ರನ್ನು ಪಾಕ್ ತಂಡದ ಸಲಹೆಗಾರರಾಗಿ ನೇಮಿಸಲು ಪಿಸಿಬಿ ತೀವ್ರ ಆಸಕ್ತಿ ವ್ಯಕ್ತಪಡಿಸಿದೆ.
ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದಲ್ಲಿ ರಿಚರ್ಡ್ಸ್ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಿಚರ್ಡ್ಸ್ ಕಾರ್ಯಶೈಲಿಯಿಂದ ಪಿಸಿಬಿ ಪ್ರಭಾವಿತವಾಗಿದೆ ಎಂದು ಪಿಸಿಬಿಯ ಉನ್ನತ ಮೂಲಗಳು ತಿಳಿಸಿವೆ.
ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ರಿಚರ್ಡ್ಸ್ ಅವರು ಕೆಲವು ಮಾಧ್ಯಮಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದು ಪಿಸಿಬಿಗೆ ತೊಡಕಾಗಿ ಪರಿಣಮಿಸಿದೆ.
ಪಾಕ್ ತಂಡ ರಿಚರ್ಡ್ಸ್‌ಗೆ ಸಲಹೆಗಾರ ಹುದ್ದೆಯ ಕೊಡುಗೆ ನೀಡಿದ್ದು, ಆ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆೆ.
ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಯಾವುದೇ ಹುದ್ದೆ ನಿಭಾಯಿಸಲು ಆಸಕ್ತಿ ಹೊಂದಿದ್ದೇನೆ ಎಂದು ಕಳೆದ ವಾರ ರಿಡರ್ಚ್ಸ್ ಹೇಳಿಕೆ ನೀಡಿದ್ದರು. ಝಿಂಬಾಬ್ವೆಯ ಮಾಜಿ ದಾಂಡಿಗ ಗ್ರಾಂಟ್ ಫ್ಲವರ್ 2014 ರಿಂದ ಪಾಕ್‌ನ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೀಗ ಪಿಸಿಬಿ ಪಾಕ್‌ನ ಮಾಜಿ ಟೆಸ್ಟ್ ಆಲ್‌ರೌಂಡರ್ ಅಝರ್ ಮಹಮೂದ್‌ರನ್ನು ಏಷ್ಯಾಕಪ್ ಹಾಗೂ ಟ್ವೆಂಟಿ-20 ಟೂರ್ನಿಗಳಿಗೆ ಬೌಲಿಂಗ್ ಕೋಚ್ ಆಗಿ ನೇಮಿಸಲು ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ದೃಢಪಡಿಸಿವೆ.