×
Ad

ಆ್ಯಪಲ್‌ಗೆ ತಿರುಗಿ ಬಿದ್ದಿರುವ ಬರ್ನಾರ್ಡಿನೊ ಸಂತ್ರಸ್ತರು

Update: 2016-02-22 20:30 IST

ವಾಶಿಂಗ್ಟನ್, ಫೆ. 22: ಸ್ಯಾನ್ ಬರ್ನಾರ್ಡಿನೊದಲ್ಲಿ ಗುಂಡು ಹಾರಿಸಿ ಹಲವರನ್ನು ಕೊಂದ ಉಗ್ರ ದಂಪತಿಯ ಪೈಕಿ ಒಬ್ಬರಿಗೆ ಸೇರಿದ ಐಫೋನನ್ನು ತೆರೆಯುವಂತೆ ಆ್ಯಪಲ್ ಇಂಕ್‌ಗೆ ಅಮೆರಿಕ ಸರಕಾರ ನೀಡಿರುವ ನಿರ್ದೇಶನವನ್ನು ಗುಂಡು ಹಾರಾಟದ ಕೆಲವು ಸಂತ್ರಸ್ತರು ಬೆಂಬಲಿಸಿದ್ದಾರೆ.

ಮಾರ್ಚ್‌ನಲ್ಲಿ ಸಂತ್ರಸ್ತರು ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಲಿದ್ದಾರೆ.

ಈ ವಿಷಯವನ್ನು ಸಂತ್ರಸ್ತರನ್ನು ಪ್ರತಿನಿಧಿಸುವ ವಕೀಲ ಸ್ಟೀಫನ್ ಲಾರ್ಸನ್ ರವಿವಾರ ಘೋಷಿಸಿದರು. ಸಂತ್ರಸ್ತರು ಭಯೋತ್ಪಾದಕರ ದಾಳಿಗೆ ಗುರಿಯಾಗಿದ್ದಾರೆ ಹಾಗೂ ‘‘ಇದು ಯಾಕೆ ಮತ್ತು ಹೇಗೆ ಸಾಧ್ಯವಾಯಿತು ಎಂಬುದನ್ನು ಅವರು ತಿಳಿದುಕೊಳ್ಳಬೇಕು’’ ಎಂದು ವಕೀಲ ಹೇಳಿದರು.

ಸಂತ್ರಸ್ತರನ್ನು ಪ್ರತಿನಿಧಿಸಬೇಕೆಂದು ಕೋರಿ ಕಾನೂನು ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯ ಪ್ರಾಸಿಕ್ಯೂಟರ್‌ಗಳು ಕಳೆದ ವಾರ ತನ್ನನ್ನು ಸಂಪರ್ಕಿಸಿದರು ಎಂದರು.

ಆದಾಗ್ಯೂ, ತಾನು ಎಷ್ಟು ಮಂದಿಯನ್ನು ಪ್ರತಿನಿಧಿಸುತ್ತಿದ್ದೇನೆ ಎಂಬುದನ್ನು ಲಾರ್ಸನ್ ತಿಳಿಸಲಿಲ್ಲ.

ಈ ವಿಷಯದಲ್ಲಿ ಸಂತ್ರಸ್ತರು ಭಾಗಿಯಾಗಿರುವುದು ಆ್ಯಪಲ್ ವಿರುದ್ಧದ ಹೋರಾಟದಲ್ಲಿ ಸರಕಾರಕ್ಕೆ ಬಲ ತುಂಬಿದೆ.

ಗುಂಡು ಹಾರಿಸಿದವರ ಪೈಕಿ ಒಬ್ಬನಾದ ಸೈಯದ್ ಫಾರೂಕ್‌ನ ಐಫೋನನ್ನು ತೆರೆಯುವಲ್ಲಿ ಸರಕಾರಕ್ಕೆ ಸಹಾಯ ಮಾಡುವಂತೆ ನ್ಯಾಯಾಲಯವೊಂದು ಇತ್ತೀಚೆಗೆ ಆ್ಯಪಲ್‌ಗೆ ಆದೇಶ ನೀಡಿದೆ. ಈ ಆದೇಶದ ವಿರುದ್ಧ ಆ್ಯಪಲ್ ಹೋರಾಡುತ್ತಿದೆ.

ಸಂತ್ರಸ್ತರಿಗೆ ನ್ಯಾಯ ಒದಗಿಸುವುದಷ್ಟೇ ಉದ್ದೇಶ: ಎಫ್‌ಬಿಐ

ಐಫೋನೊಂದನ್ನು ತೆರೆಯುವಂತೆ ಆ್ಯಪಲ್ ಕಂಪೆನಿಗೆ ಸೂಚಿಸುವ ನ್ಯಾಯಾಲಯ ಆದೇಶವನ್ನು ಪಡೆಯಲು ಅಮೆರಿಕ ಸರಕಾರ ಮುಂದಾಗಿರುವುದು ‘‘ಸಂತ್ರಸ್ತರು ಮತ್ತು ನ್ಯಾಯ’’ದ ಹಿತ ಕಾಯುವುದಕ್ಕಾಗಿ ಎಂದು ಎಫ್‌ಬಿಐ ನಿರ್ದೇಶಕ ಜೇಮ್ಸ್ ಕಾಮಿ ಹೇಳಿದ್ದಾರೆ.

ಬಂದ್ ಆದ ಫೋನ್‌ಗೆ ಪ್ರವೇಶ ಪಡೆಯುವುದಷ್ಟೇ ನ್ಯಾಯ ಇಲಾಖೆಯ ಮನವಿಯ ಉದ್ದೇಶವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

‘‘ನಾವು ಯಾರದೇ ರಹಸ್ಯ ಸಂಕೇತಗಳನ್ನು ಒಡೆಯ ಬಯಸುವುದಿಲ್ಲ ಅಥವಾ ಮಾಸ್ಟರ್ ಕೀಯನ್ನು ಹೊಂದಲು ಬಯಸುವುದಿಲ್ಲ’’ ಎಂದು ರವಿವಾರ ಇಂಟರ್‌ನೆಟ್‌ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News