ಗುಂಡು ಹಾರಾಟದಲ್ಲಿ ‘ಸತ್ತಿದ್ದ’ ಬಾಲಕಿ ತಾಯಿಯ ಕೈ ಅದುಮಿದಳು!

Update: 2016-02-22 16:22 GMT

ವಾಶಿಂಗ್ಟನ್, ಫೆ. 22: ಅಮೆರಿಕದ ಮಿಶಿಗನ್ ರಾಜ್ಯದ ಕಲಝ್ಮಝೂ ನಗರದಲ್ಲಿ ಶನಿವಾರ ರಾತ್ರಿ ಉಬರ್ ಟ್ಯಾಕ್ಸಿ ಚಾಲಕನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಸತ್ತವರಲ್ಲಿ ಈ 14 ವರ್ಷದ ಬಾಲಕಿಯೂ ಸೇರಿದ್ದಳು.

ಪಾರ್ಕಿಂಗ್ ಸ್ಥಳವೊಂದರಲ್ಲಿ ಕಾರಿನಲ್ಲಿ ಕುಳಿತಿದ್ದ ಆಕೆಗೆ ಗುಂಡು ಬಡಿದಿತ್ತು. ಆಸ್ಪತ್ರೆಯಲ್ಲಿ ವಿವಿಧ ವಯರ್‌ಗಳು ಮತ್ತು ಟ್ಯೂಬ್‌ಗಳ ಬಲೆಯಲ್ಲಿ ಆಕೆಯ ದೇಹ ನಿಶ್ಚಲವಾಗಿತ್ತು.

ಈ ಬಾಲಕಿ ಗುಂಡು ಹಾರಾಟದಲ್ಲಿ ಮೃತಪಟ್ಟ ಏಳನೆ ಸಂತ್ರಸ್ತೆ ಎಂಬುದಾಗಿ ಪೊಲೀಸರು ರವಿವಾರ ಮುಂಜಾನೆ 2 ಗಂಟೆಗೆ ಘೋಷಿಸಿದರು. ಮಾಧ್ಯಮಗಳು ಮೃತರ ಸಂಖ್ಯೆಯನ್ನು ಪರಿಷ್ಕರಿಸಿದವು.

ಮರಣೋತ್ತರ ಪರೀಕ್ಷೆಗೆ ವೈದ್ಯರು ಸಿದ್ಧರಾಗುತ್ತಿದ್ದರು. ಬಾಲಕಿಯ ತಾಯಿ ಕೊನೆಯ ಬಾರಿಗೆ ಎಂಬಂತೆ ಮಗಳ ಪಕ್ಕದಲ್ಲಿ ನಿಂತಿದ್ದರು. ಆಗ ತಾಯಿಗೆ ತನ್ನ ಮಗಳು ಕೈಯನ್ನು ಅದುಮುತ್ತಿರುವ ಅನುಭವವಾಯಿತು!

ತಕ್ಷಣ ಇದನ್ನು ವೈದ್ಯರ ಗಮನಕ್ಕೆ ತಂದಾಗ ಬಾಲಕಿ ಜೀವಂತವಾಗಿರುವುದು ಪತ್ತೆಯಾಯಿತು. ಅಲ್ಲಿ ಸೇರಿದ್ದವರ ಸಂತೋಷಕ್ಕೆ ಪಾರವೇ ಇರಲಿಲ್ಲ.

ಆದರೆ, ಬಾಲಕಿಯ ಪರಿಸ್ಥಿತಿ ಈಗಲೂ ಗಂಭೀರವಾಗಿಯೇ ಇದೆ. ರವಿವಾರ ಬೆಳಗ್ಗೆ ಆಕೆಗೆ ಶಸ್ತ್ರಕ್ರಿಯೆ ನಡೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News