ಕೊರಿಯ ಶಾಂತಿ ಮಾತುಕತೆ ಪ್ರಸ್ತಾಪ ತಿರಸ್ಕರಿಸಿದ ಅಮೆರಿಕ
Update: 2016-02-22 20:49 IST
ವಾಶಿಂಗ್ಟನ್, ಫೆ. 22: ಕೊರಿಯ ಪರ್ಯಾಯ ದ್ವೀಪಕ್ಕೆ ಸಂಬಂಧಿಸಿದ ಶಾಂತಿ ಒಪ್ಪಂದದ ಬಗ್ಗೆ ಚರ್ಚಿಸಲು ಉತ್ತರ ಕೊರಿಯ ಕಳುಹಿಸಿರುವ ಪ್ರಸ್ತಾಪವೊಂದು ತನಗೆ ಬಂದಿದೆ ಎಂದು ಅಮೆರಿಕ ರವಿವಾರ ಹೇಳಿದೆ. ಆದರೆ, ತನ್ನ ಪರಮಾಣು ಅಸ್ತ್ರಗಳನ್ನು ಕಡಿಮೆಗೊಳಿಸುವ ಬಗ್ಗೆ ಪರಿಶೀಲನೆ ನಡೆಸಲು ಉತ್ತರ ಕೊರಿಯ ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರಸ್ತಾಪವನ್ನು ತಿರಸ್ಕರಿಸಿರುವುದಾಗಿ ಅಮೆರಿಕ ಹೇಳಿತು.
1950-53ರ ಕೊರಿಯ ಯುದ್ಧವನ್ನು ಔಪಚಾರಿಕವಾಗಿ ನಿಲ್ಲಿಸುವ ಶಾಂತಿ ಮಾತುಕತೆಗೆ ಅಮೆರಿಕ ಸರಕಾರ ರಹಸ್ಯವಾಗಿ ಒಪ್ಪಿಗೆ ನೀಡಿತ್ತು. ಉತ್ತರ ಕೊರಿಯ ತನ್ನ ಇತ್ತೀಚಿನ ಪರಮಾಣು ಪರೀಕ್ಷೆ ನಡೆಸಿದ ಕೆಲವೇ ದಿನಗಳ ಮೊದಲು ಈ ಬೆಳವಣಿಗೆ ನಡೆದಿತ್ತು.
ಆದರೆ, ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಾತುಕತೆ ಪ್ರಸ್ತಾಪವನ್ನು ಅಮೆರಿಕ ತಳ್ಳಿಹಾಕಿತು ಎಂದು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.