×
Ad

ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಸಾವಿರ ಯೂರೋ ದಂಡ ವಿಧಿಸಿದರು !

Update: 2016-02-22 21:08 IST

ಲಂಡನ್ , ಫೆ. 22 : ಇದು ಅತ್ಯಂತ ವಿಶೇಷ ಪ್ರಕರಣ. ಹಾಗಾಗಿ ವಿಶೇಷ ದಂಡವನ್ನೇ ಕಕ್ಕಿಸಲಾಗಿದೆ. ವಿಷಯ ಹೀಗಿದೆ. 
ಭಾರತದಿಂದ ಬರ್ಮಿಂಗ್ ಹ್ಯಾಮ್ ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪಾನಮತ್ತನಾಗಿ ಎಲ್ಲರೆದುರೇ ಮೂತ್ರ ವಿಸರ್ಜನೆ ಮಾಡಿದ ಪ್ರಯಾಣಿಕನಿಗೆ ಒಂದು ಸಾವಿರ ಯೂರೋ ದಂಡ ವಿಧಿಸಲಾಗಿದೆ . 
39 ವರ್ಷದ ಜಿನು ಅಬ್ರಹಾಂ ತನ್ನ ಮಗನೊಂದಿಗೆ ಪ್ರಯಾಣಿಸುತ್ತಿದ್ದ. ವಿಮಾನ ಬರ್ಮಿಂಗ್ ಹ್ಯಾಮ್ ತಲುಪಲು 40 ನಿಮಿಷಗಳಿರುವಾಗ ಹಟಾತ್ತನೆ ಎದ್ದು ನಿಂತ ಜಿನು ಎಲ್ಲರೆದುರೇ ತನ್ನ ಪ್ಯಾಂಟ್ ಹಾಗು ಒಳ ಉಡುಪನ್ನು ಕೆಳಗಿಳಿಸಿ ವಿಮಾನದ ನೆಲ ಹಾಗು ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದರಿಂದ ಆಘಾತಗೊಂಡ ಸಹ ಪ್ರಯಾಣಿಕರು ಹಾಗು ಸಿಬ್ಬಂದಿ ಅವರನ್ನು ತಡೆದು, ಪ್ಲಾಸ್ಟಿಕ್ ಕೈ ಕೋಳ ಹಾಕಿ ಕೂರಿಸಿ ವಿಮಾನ ತಲುಪಿದ ಕೂಡಲೇ ಅವರನ್ನು ಬಂಧಿಸಲಾಯಿತು . 

ಇಲ್ಲಿನ ಬರ್ಮಿಂಗ್ ಹ್ಯಾಮ್ ಕ್ರವ್ನ್  ನ್ಯಾಯಾಲಯದಲ್ಲಿ ಜಿನುಗೆ 300 ಯೂರೋ ದಂಡ, 500 ಯೂರೋ ಪರಿಹಾರ ಹಾಗು ಇನ್ನಿತರ ಖರ್ಚು ವೆಚ್ಚಗಳೆಂದು ಒಟ್ಟು ಒಂದು ಸಾವಿರ ಯೂರೋ ದಂಡ ವಿಧಿಸಲಾಯಿತು. 
ಜಿನು ಮಾನಸಿಕ ಒತ್ತಡಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದು ವಿಮಾನ ನಿಲ್ದಾಣದಲ್ಲಿ ತನ್ನ ಔಷಧಿಯನ್ನು ಕಳಕೊಂಡಿದ್ದ. ಹಾಗಾಗಿ ಅದರ ಬದಲು ತಾನೇ ಯಾವುದೋ ಬೇರೆ ಔಷಧಿ ಸೇವಿಸಿದ್ದು ಈ ಎಲ್ಲ ಎಡವಟ್ಟಿಗೆ ಕಾರಣ ಎಂದು ಆತನ ವಕೀಲ ತಿಳಿಸಿದ್ದಾರೆ.
ಚೇತರಿಸಿಕೊಂಡ ಬಳಿಕ ತಾನು ವಿಮಾನದಲ್ಲಿ ಏನು ಮಾಡಿದ್ದೆ ಎಂಬುದು ಜಿನುವಿಗೆ  ಸ್ವಲ್ಪವೂ ನೆನಪಿರಲಿಲ್ಲ. ಆದರೆ ಆತನ ಎಡವಟ್ಟನ್ನು ಸಹ ಪ್ರಯಾಣಿಕರು ಹಾಗು ಸಿಬ್ಬಂದಿ ಬೇಕೆಂದರೂ ಮರೆಯುವುದು ಬಹಳ ಕಷ್ಟ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News