×
Ad

ಮೀಸಲಾತಿ ಅರ್ಹತೆ ನಿರ್ಧರಿಸಲು ಸಮಿತಿ: ಅರೆಸ್ಸೆಸ್ ಸಲಹೆ

Update: 2016-02-23 19:41 IST

ಕೋಲ್ಕತಾ,ಫೆ.23: ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಮೀಸಲಾತಿಗೆ ಅರ್ಹತೆಯನ್ನು ನಿರ್ಧರಿಸಲು ರಾಜಕೀಯೇತರ ಸಮಿತಿಯೊಂದು ರಚನೆಯಾಗಬೇಕೆಂದು ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಸಲಹೆ ಮಾಡಿದ್ದಾರೆ.

   ಕೋಲ್ಕತಾದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ‘‘ಹಲವರು ಮೀಸಲಾತಿಗಾಗಿ ಆಗ್ರಹಿಸುತ್ತಿದ್ದಾರೆ. ಯಾರು ಮೀಸಲಾತಿಗೆ ಅರ್ಹರೆಂಬುನ್ನು ನಿರ್ಧರಿಸಲು ಸಮಿತಿಯೊಂದು ರಚನೆಯಾಗಬೇಕಿದೆ. ಆದರೆ ಆ ಸಮಿತಿಯು ರಾಜಕೀಯ ರಹಿತವಾಗಿರಬೇಕು. ಆಗ ಯಾವುದೇ ಸ್ಥಾಪಿತಹಿತಾಸಕ್ತಿಗಳು ಪ್ರಭಾವ ಬೀರಲು ಸಾಧ್ಯವಿಲ್ಲ’’ಎಂದವರು ಹೇಳಿದ್ದಾರೆ.

ಮುಷ್ಕರ ನಿರತ ಜಾಟ್ ಸಮುದಾಯದ ಮೀಸಲಾತಿ ಬೇಡಿಕೆಯನ್ನು ಪರಿಶೀಲಿಸಲು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡ ನೇತೃತ್ವದಲ್ಲಿ ಸಮಿತಿಯೊಂದನ್ನು ಸ್ಥಾಪಿಸುವುದಾಗಿ ಕೇಂದ್ರ ಸರಕಾರ ಪ್ರಕಟಿಸಿದ ಬೆನ್ನಲ್ಲೇ ಭಾಗ್ವತ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಸಮಾಜದ ಯಾವ ವರ್ಗವನ್ನು ಮುಂದೆ ತರಬೇಕು, ಅವರಿಗೆ ಎಷ್ಟು ಸಮಯದವರೆಗೆ ಮೀಸಲಾತಿ ನೀಡಬೇಕು ಎಂಬ ಬಗ್ಗೆ ಕಾಲಮಿತಿ ಆಧಾರಿತ ಕಾರ್ಯಕ್ರಮವೊಂದನ್ನು ರೂಪಿಸಬೇಕು.ಅದನ್ನು ಜಾರಿಗೆ ತರುವ ಅಧಿಕಾರವನ್ನು ಸಮಿತಿಗೆ ವಹಿಸಬೇಕು ಎಂದವರು ಹೇಳಿದ್ದಾರೆ.

ಮೀಸಲಾತಿ ಸಮಸ್ಯೆಯನ್ನು ಯಾವ ರೀತಿಯಾಗಿ ಬಗೆಹರಿಸಬಹುದು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಭಾಗ್ವತ್ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮಾನವಾದ ಅವಕಾಶ ಲಭಿಸಬೇಕು ಎಂದರು.

 ಸ್ವಾತಂತ್ರಾನಂತರ ಡಾ. ಬಿ.ಆರ್.ಅಂಬೇಡ್ಕರ್ ಅವರು ಆರ್ಥಿಕ ಸ್ವಾತಂತ್ರ ಹಾಗೂ ಸಾಮಾಜಿಕ ತಾರತಮ್ಯದಿಂದ ಸ್ವಾತಂತ್ರವನ್ನು ಪ್ರತಿಪಾದಿಸಿದ್ದರು. ಸಾಮಾಜಿಕ ತಾರತಮ್ಯವು ಎಲ್ಲಿಯವರೆಗೆ ಇರುವುದೋ ಅಲ್ಲಿಯ ತನಕ ಮೀಸಲಾತಿ ಸಮಸ್ಯೆ ಇದ್ದೇ ಇರುವುದು ಎಂದು ಭಾಗ್ವತ್ ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News