×
Ad

ಬ್ಲಾಗ್, ಫೇಸ್‌ಬುಕ್, ಟ್ವಿಟರ್ ನಿಯಂತ್ರಣಕ್ಕೆ ವಿಶೇಷ ಮಾಧ್ಯಮ ಸೆಲ್ ಸ್ಥಾಪನೆಗೆ ಚಿಂತನೆ

Update: 2016-02-23 22:19 IST

ಹೊಸದಿಲ್ಲಿ,ಫೆ.23: ಅಂತರ್ಜಾಲ ತಾಣಗಳಲ್ಲಿ ಪ್ರಸಾರವಾಗುವ ಪ್ರಚೋದನಾಕಾರಿ ಮತ್ತು ನಕಾರಾತ್ಮಕವಾದ ಸುದ್ದಿಗಳನ್ನು, ಲೇಖನಗಳನ್ನು ಮತ್ತು ಪ್ರತಿಕ್ರಿಯೆಗಳಿಗೆ ಕಡಿವಾಣ ಹಾಕಲು ವಿಶೇಷ ಮಾಧ್ಯಮ ಸೆಲ್ ಒಂದನ್ನು ಸ್ಥಾಪಿಸಲು ಕೇಂದ್ರ ಸರಕಾರ ಚಿಂತಿಸುತ್ತಿದೆ.

 ಬ್ಲಾಗ್‌ಗಳು, ಟಿವಿ ವಾಹಿನಿಗಳು ಹಾಗೂ ಸುದ್ದಿಪತ್ರಿಕೆಗಳ ವೆಬ್‌ಸೈಟ್‌ಗಳು, ಫೇಸ್‌ಬುಕ್,ಟ್ವಿಟರ್, ಇನ್‌ಸ್ಟಾಗ್ರಾಮ್ ಹಾಗೂ ಯೂಟ್ಯೂಬ್‌ನಂತಹ ಸಾಮಾಜಿಕ ಜಾಲ ತಾಣಗಳ ಮೇಲೆ ದಿನವಿಡೀ ಕಣ್ಗಾವಲಿಡಲು ರಾಷ್ಟ್ರೀಯ ಮಾಧ್ಯಮ ವಿಶ್ಲೇಷಣಾ ಕೇಂದ್ರ (ಎನ್‌ಎಂಎಸಿ)ವನ್ನು ಸ್ಥಾಪಿಸಬೇಕೆಂದು ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯಾಲಯ (ಎನ್‌ಎಸ್‌ಸಿಎಸ್) ಕಳೆದ ತಿಂಗಳು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತ್ತು.
ಎನ್‌ಎಂಎಸಿ ಸ್ಥಾಪನೆಯ ಮೂಲಕ ಸರಕಾರಕ್ಕೆ ಆನ್‌ಲೈನ್‌ನಲ್ಲಿ ಪ್ರಸಾರವಾಗುವ ಸುದ್ದಿ, ವಿಷಯಗಳ ಮೇಲೆ ಕಣ್ಗಾವಲಿಡಲು ಸಾಧ್ಯವಾಗಲಿದೆ. ಪ್ರತಿ ಸಲವೂ ನಕಾರಾತ್ಮಕವಾದ ಸುದ್ದಿಗಳು ಪ್ರಕಟವಾದಾಗಲೆಲ್ಲಾ, ಪತ್ರಿಕಾ ಬಿಡುಗಡೆ, ಪತ್ರಿಕಾಗೋಷ್ಠಿ ಪ್ರಕಟಣೆಗಳ ಮೂಲಕ ಅವುಗಳನ್ನು ಎದುರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ನಕಾರಾತ್ಮಕ ಸುದ್ದಿಗಳಿಗೆ ಕಡಿವಾಣ ಹಾಕಲು ಸಚಿವಾಲಯದ ಹಿರಿಯ ಅಧಿಕಾರಿಗಳು, ಪತ್ರಿಕಾ ಮಾಹಿತಿ ಬ್ಯೂರೋದ ನೋಡಲ್ ಅಧಿಕಾರಿಗಳು ಹಾಗೂ ಸ್ವತಂತ್ರ ತಜ್ಞರನ್ನೊಳಗೊಂಡ ಸ್ವತಂತ್ರ ತಜ್ಞರ ತಂಡವನ್ನು ಸ್ಥಾಪಿಸುವಂತೆ ಕೇಂದ್ರ ಸರಕಾರ ಕಳೆದ ಆಗಸ್ಟ್‌ನಲ್ಲಿ ಎಲ್ಲ ಸಚಿವರಿಗೆ ಸೂಚನೆ ನೀಡಿತ್ತು. ದಿಲ್ಲಿಯ ಇಂದ್ರಪ್ರಸ್ಥ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಹಾಯಕ ಪ್ರೊಫೆಸರ್ ಪೊನ್ನುರಂಗಂ ಕುಮಾರಗುರು ವಿನ್ಯಾಸಗೊಳಿಸಿರುವ ಶೋಧಕ ಸಾಫ್ಟ್‌ವೇರ್‌ನಿಂದ ಪ್ರೇರಿತವಾಗಿ ಎನ್‌ಎಂಎಸಿ ಈ ಪ್ರಸ್ತಾಪ ಮಾಡಿದೆ.
ಈ ವಿನೂತನ ಸಾಫ್ಟ್‌ವೇರ್ , ವೆಬ್‌ಸೈಟ್‌ಗಳು, ಬ್ಲಾಗ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿರುವ ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಹಾಗೂ ಸಂಭಾಷಣೆಗಳನ್ನು ಪತ್ತೆಹಚ್ಚಿಕೊಡುವ ಸಾಮರ್ಥ್ಯ ಹೊಂದಿರುವುದಾಗಿ ಮೂಲಗಳು ತಿಳಿಸಿವೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News