×
Ad

ಮಧ್ಯ ಪ್ರದೇಶದ ಬುಡಕಟ್ಟು ಜನಾಂಗದ ಆಶಾಕಿರಣ ಈ ಬನೀಬಾಯಿ

Update: 2016-02-23 23:47 IST

ಇಂದೋರ್: ಆಕೆಯತ್ತ ಒಮ್ಮೆ ದೃಷ್ಟಿ ಹಾಯಿಸಿದಾಗ ಆಕೆ ಇಷ್ಟೆಲ್ಲಾ ಸಾಧಿಸಿದ ಅದ್ಭುತ ಛಲಗಾತಿಯೆಂದು ಯಾರು ಕೂಡ ಊಹಿಸಲು ಸಾಧ್ಯವಿಲ್ಲ. ಆದರೆ ಮಧ್ಯ ಪ್ರದೇಶದ ಭಿಲಾಲ ಬುಡಕಟ್ಟು ಜನಾಂಗದ ಈ ಯುವತಿಯ ಸಾಧನೆ ನಿಜವಾಗಿಯೂ ಹೆಮ್ಮೆ ಪಡುವಂತಹುದು.
 ಆಕೆಯ ಹೆಸರೇ ಬನೀಬಾಯಿ ನಿಂಗ್ವಾಲ್. ಹೈಸ್ಕೂಲಿನಲ್ಲಿ ಕಲಿಯುತ್ತಿರಬೇಕಾದರೆ ಅನಿವಾರ್ಯ ಕಾರಣಗಳಿಂದ ಆಕೆ ಶಿಕ್ಷಣ ಮೊಟಕುಗೊಳಿಸಬೇಕಾಗಿ ಬಂತು. ಆದರೆ ಇದೀಗ ಈಕೆಯಲ್ಲಿದೆ ಬುಡಕಟ್ಟು ಜನಾಂಗದವರು ಹೆಚ್ಚಾಗಿ ವಾಸಿಸುವ ಅಲಿರಾಜ್‌ಪುರ್ ಜಿಲ್ಲೆಯ ನಿರುದ್ಯೋಗ, ಅಪೌಷ್ಟಿಕಾಂಶತೆ ಹಾಗೂ ಮದ್ಯವ್ಯಸನ ಸಮಸ್ಯೆಗಳಿಗೆ ಸುಲಭ ಪರಿಹಾರ.


ಈ ಜಿಲ್ಲೆಯ ನೂರಾರು ಮಂದಿ ಬೆನ್ನು ಮುರಿಯುವಂತಹ ಆದರೆ ಕಡಿಮೆ ಸಂಬಳ ತರುವಂತಹ ಕೆಲಸಗಳಿಗೆ ಇತರೆಡೆಗೆ ವಲಸೆ ಹೋಗದಿರಲು ಈ ಯುವತಿಯೇ ಕಾರಣ. ಈ ಜಿಲ್ಲೆಯ ಗ್ರಾಮಸ್ಥರು ಈಗ ತಂತಮ್ಮ ಮನೆಗಳ ಸಮೀಪವೇ ಸರಕಾರದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ವಯ ಕೆಲಸ ಮಾಡುತ್ತಾರೆ. ಆಹಾರ ಭದ್ರತಾ ಕಾಯ್ದೆಯ ಬಗ್ಗೆಯೂ ಜನರಲ್ಲಿ ಅರಿವನ್ನುಂಟು ಮಾಡುವ ಈಕೆ ತನ್ನ ಪ್ರಯತ್ನದಿಂದ ಹಿಂದುಳಿದ ಪ್ರದೇಶಗಳ ಮಹಿಳೆಯರು ಹಾಗೂ ಮಕ್ಕಳು ಎದುರಿಸುವ ಪೌಷ್ಟಿಕಾಂಶ ಕೊರತೆಯ ಸಮಸ್ಯೆನ್ನು ಪರಿಹರಿಸಲು ಸಾಕಷ್ಟು ಯಶಸ್ವಿಯಾಗಿದ್ದಾಳೆ. ಸುಮಾರು ಎರಡು ಡಜನಿಗೂ ಹೆಚ್ಚಿನ ಹಳ್ಳಿಗಳ ಪುರುಷರು ಹಾಗೂ ಮಹಿಳೆಯರು ಮದ್ಯವ್ಯಸನ ಮುಕ್ತರಾಗಿದ್ದರೆ ಅದಕ್ಕೆ ಕೂಡ ಬನೀಬಾಯಿಯೇ ಕಾರಣ. ಕೆಲವು ವರ್ಷಗಳ ಹಿಂದೆ ಎನ್‌ಜಿಒ ಧಸ್ ಗ್ರಾಮೀಣ್ ವಿಕಾಸ್ ಕೇಂದ್ರ ಆಯೋಜಿಸಿದ್ದ ಲಿಂಗಾಧರಿತ ಹಕ್ಕುಗಳ ಬಗೆಗಿನ ತರಬೇತಿ ಕಾರ್ಯಕ್ರಮದಲ್ಲಿ ಭಾಗ ವಹಿಸಿದ್ದು ಆಕೆಯ ಪಾಲಿಗೆ ಸ್ಫೂರ್ತಿಯ ಸೆಲೆಯಾಯಿತು. ಮೊತ್ತ ಮೊದಲನೆಯದಾಗಿ ಆಕೆ ಅಕ್ರಮ ಮದ್ಯ ಮಾರಾಟಕ್ಕೆ ತೆರೆ ಬೀಳುವಂತೆ ಮಾಡಿದರೆ ನಂತರ ಅಪೌಷ್ಟಿಕಾಂಶತೆ ಸಮಸ್ಯೆ ಪರಿಹಾರಕ್ಕೆ ಕಂಕಣ ಬದ್ಧಳಾದಳು.
‘ಬನೀಬಾಯಿ ತನ್ನ ಸ್ವಪ್ರಯತ್ನದಿಂದ ಜನರನ್ನು ಸಂಘಟಿಸಿ ಅವರಲ್ಲಿ ಹಲವು ವಿಚಾರಗಳ ಬಗ್ಗೆ ಜಾಗೃತಿಯನ್ನುಂಟು ಮಾಡುವಲ್ಲಿ ಯಶಸ್ವಿಯಾಗಿದ್ದಾಳೆ,’’ಎಂದು ಬುಡಕಟ್ಟು ಜನಾಂಗದ ಹಕ್ಕು ಕಾರ್ಯಕರ್ತ ಶಂಕರ್ ತದ್ವಡೆ ಹೇಳುತ್ತಾರೆ.
ತನ್ನ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ, ಐಸಿಡಿಎಸ್, ಆಹಾರ ಭದ್ರತಾ ಕಾಯ್ದೆ ಯಶಸ್ವಿಯಾಗಿ ಜಾರಿಯಾಗುವಂತೆ ಆಕೆ ನೋಡಿಕೊಂಡಿದ್ದಾಳೆ. ಆಕೆಯ ಸಮಾಜ ಸೇವಾ ಕೈಂಕರ್ಯ ನಿಜವಾಗಿಯೂ ಸ್ತುತ್ಯಾರ್ಹ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News