×
Ad

ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದವರಾರು?

Update: 2016-02-23 23:49 IST

ಗೋಧ್ರಾ ರೈಲಿಗೆ ಬೆಂಕಿ ಹಚ್ಚಿ, ಅದರ ನೆಪದಲ್ಲಿ ಗುಜರಾತ್‌ನಲ್ಲಿ ನಡೆದ ಬರ್ಬರ ಹತ್ಯಾಕಾಂಡ ಇಂದಿಗೂ ಭಾರತದ ಹಣೆಗಿಟ್ಟ ಕಪ್ಪು ಚುಕ್ಕಿ. ಗಾಂಧಿ ಹುಟ್ಟಿದ ನೆಲ ಎಂದು ಹೆಮ್ಮೆ ಪಡುತ್ತಿದ್ದ ಗುಜರಾತ್‌ನ ಕುರಿತಂತೆ, ಕೀಳರಿಮೆ ಪಟ್ಟುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾದುದು ಈ ಹತ್ಯಾಕಾಂಡದ ಬಳಿಕ. ಮೇಲ್ನೋಟಕ್ಕೆ ಒಣಗಿದೆಯೆಂಬಂತೆ ಕಂಡರೂ, ಆಗಾಗ ಈ ಗಾಯ ತೆರೆಯುತ್ತ ಸುದಿ ಮಾಡುತ್ತದೆ. ಇದೀಗ ಆ ಗಾಯ ಮತ್ತೆ ಬಿರಿದಿದೆ. ಗೋಧ್ರಾ ರೈಲಿಗೆ ಬಿದ್ದ ಬೆಂಕಿಯ ಕುರಿತಂತೆ ಗೋಧ್ರಾದ ಕುರಿತಂತೆ ಗುಜರಾತ್‌ನ ಪಟೇಲ್ ಸಮುದಾಯಕ್ಕೆ ಸೇರಿದ ಕೆಲವು ಮುಖಂಡರು ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಳೆದ ಒಂದು ದಶಕದಲ್ಲಿ ನರೇಂದ್ರ ಮೋದಿಯ ಜೊತೆಗೆ ಗುರುತಿಸಿಕೊಂಡಿದ್ದ ಈ ಸಮುದಾಯ, ಇದೀಗ ಬಿಜೆಪಿಗೆ ತಿರುಗಿ ನಿಂತಿದೆ. ಮತ್ತು ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ನಡೆದ ಘಟನೆಗಳ ಕುರಿತಂತೆ ಪಟೇಲ್ ಸಮುದಾಯ ಹಲವು ಸತ್ಯಗಳನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿದೆ. ಮತ್ತು ಆ ಸತ್ಯಗಳನ್ನು ಅವರು ಮಾಧ್ಯಮಗಳ ಮೂಲಕ ಬಹಿರಂಗ ಪಡಿಸುತ್ತಿದ್ದಾರೆ.

ಗೋಧ್ರಾ ರೈಲಿಗೆ ಬೆಂಕಿ ಹಚ್ಚಿರುವುದು ಮುಸ್ಲಿಮರು ಎನ್ನುವುದನ್ನು ನಾವು ನಂಬುವುದಿಲ್ಲ ಎಂಬ ಹೇಳಿಕೆಗಳನ್ನು ಇದೀಗ ಪಾಟಿದಾರ್ ಮುಖಂಡರು ಮಾದ್ಯಮಗಳಿಗೆ ನೀಡುತ್ತಿದ್ದಾರೆ. ಗೋಧ್ರಾ ರೈಲಿಗೆ ಬೆಂಕಿ ಬಿದ್ದಿರುವುದರ ಹಿಂದೆ ಬಿಜೆಪಿಯ ಕೈವಾಡವಿದೆ ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ. 2002ರಲ್ಲಿ ಬಿಜೆಪಿ ಗುಜರಾತ್‌ನಲ್ಲಿ ಮರು ಆಯ್ಕೆಯಾಗುವುದು, ಮೋದಿ ಮತ್ತೆ ಮುಖ್ಯಮಂತ್ರಿಯಾಗುವುದು ಅತ್ಯಗತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಗೋಧ್ರಾ ರೈಲಿನ ದಹನವನ್ನು ಮುಂದಿಟ್ಟುಕೊಂಡು ಬೃಹತ್ ಹತ್ಯಾಕಾಂಡವನ್ನು ಬಿಜೆಪಿ ಪ್ರಾಯೋಜಿಸಿತು ಎಂದು ಅವರು ಆರೋಪಿಸುತ್ತಿದ್ದಾರೆ. ಗೋಧ್ರಾ ರೈಲಿಗೆ ಬೆಂಕಿ ಬಿದ್ದುದರ ಲಾಭವನ್ನು ತನ್ನದಾಗಿಸಿಕೊಂಡಿದ್ದು ಬಿಜೆಪಿ ಎನ್ನುವುದು ಪಾಟಿದಾರ್ ಮುಖಂಡರ ವಾದ. ಮೇಲ್ನೋಟಕ್ಕೆ ಗುಜರಾತ್‌ನ ಬಿಜೆಪಿ ಸರಕಾರದ ಮೇಲಿನ ಅಸಮಾಧಾನದಿಂದ ಅವರು ಈ ರೀತಿಯ ಆರೋಪ ಮಾಡಿದ್ದಾರೆ ಎಂದು ಹೇಳಬಹುದಾಗಿದ್ದರೂ, ಇಂದು ಪಾಟಿದಾರ್ ಮುಖಂಡರು ಬಹಿರಂಗಪಡಿಸಿರುವ ಸತ್ಯಗಳನ್ನು, ಈ ಹಿಂದೆ ಯು.ಸಿ. ಬ್ಯಾನರ್ಜಿ ಆಯೋಗ ಕೂಡ ಉಲ್ಲೇಖಿಸಿತ್ತು ಎನ್ನುವುದು ಗಮನಾರ್ಹ. ಗೋಧ್ರಾ ರೈಲಿನಲ್ಲಿ ಸಂಭವಿಸಿದ್ದು ಏನು ಎನ್ನುವುದರ ಕುರಿತಂತೆ ಯು.ಸಿ. ಬ್ಯಾನರ್ಜಿ ತಂಡ ತನಿಖೆ ನಡೆಸಿ, ರೈಲ್ವೆ ಸಚಿವಾಲಯಕ್ಕೆ ಒಂದು ವರದಿಯನ್ನು ನೀಡಿತ್ತು. ಆ ವರದಿಯಲ್ಲಿ ಬೆಂಕಿ ಹೊರಗಿನಿಂದ ಬಿದ್ದುದಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು. ವರದಿಯ ಪ್ರಕಾರ, ರೈಲಿನೊಳಗೇ ಬೆಂಕಿ ಕಾಣಿಸಿಕೊಂಡಿದೆ. ಯಾರೂ, ರೈಲನ್ನು ತಡೆದು, ಪೆಟ್ರೋಲ್ ಸುರಿದು ದಹಿಸಿಲ್ಲ. ಬ್ಯಾನರ್ಜಿ ವರದಿಯ ಪ್ರಕಾರ ಬೆಂಕಿ ಒಂದು ಆಕಸ್ಮಿಕ. ಆದರೆ ಇನ್ನೂ ಆಳಕ್ಕೆ ಇಳಿದು ನೋಡಿದರೆ, ಬೆಂಕಿ ಆಕಸ್ಮಿಕವಾಗಿರಬೇಕು ಎಂದೇನಿಲ್ಲ. ರೈಲಿನಲ್ಲಿರುವ ಸಂಘಪರಿವಾರದ ಕಾರ್ಯಕರ್ತರು ಪ್ರಯಾಣದುದ್ದಕ್ಕೂ ದ್ವೇಷ ಪೂರಿತ ಘೋಷಣೆಗಳನ್ನು ಕೂಗುತ್ತಲೇ ಬಂದಿದ್ದಾರೆ. ರೈಲಿನಲ್ಲಿರುವ ಇತರ ಪ್ರಯಾಣಿಕರಿಗೂ ಸಾಕಷ್ಟು ತೊಂದರೆಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲ, ಕೆಲವು ಅವಿವೇಕಿ ಸಂಘಪರಿವಾರ ಕಾರ್ಯಕರ್ತರು ರೈಲಿನೊಳಗೆ ಅಡುಗೆಯನ್ನು ಮಾಡಿದ್ದಾರೆ. ಈ ಸಂದರ್ಭದಲ್ಲಿ ರೈಲಿನೊಳಗೆ ಆಕಸ್ಮಿಕ ಬೆಂಕಿ ಹತ್ತಿರಬೇಕು, ಅಥವಾ ಈ ಸಂದರ್ಭವನ್ನು ಬಳಸಿಕೊಂಡು ಸಂಘಪರಿವಾರ ಕಾರ್ಯಕರ್ತರೇ ಬೆಂಕಿಯನ್ನು ಹಚ್ಚಿರಬೇಕು. ತಮ್ಮ ಮುಂದಿನ ಭಾರೀ ಹತ್ಯಾಕಾಂಡಕ್ಕೆ ಒಂದು ದೊಡ್ಡ ಕಾರಣವನ್ನು ಅವರೇ ಸೃಷ್ಟಿಸಿರಬೇಕು. ಬ್ಯಾನರ್ಜಿ ವರದಿಯ ಆಧಾರದಲ್ಲಿ ನಾವು ಇದನ್ನು ಊಹಿಸಿಕೊಳ್ಳಬಹುದಾಗಿದೆ.

ಸಿಂಧಗಿಯಲ್ಲಿ ತಾವೇ ಪಾಕಿಸ್ತಾನದ ಧ್ವಜ ಹಾರಿಸಿ ಬಳಿಕ ಗಲಭೆ ಎಬ್ಬಿಸಿದವರು, ಮಾಲೆಗಾಂವ್, ಅಜ್ಮೀರ್, ಸಂಜೋತಾ ಎಕ್ಸ್‌ಪ್ರೆಸ್‌ನಲ್ಲಿ ಬಾಂಬಿಟ್ಟು ತಮ್ಮದೇ ದೇಶವಾಸಿಗಳನ್ನು ಬರ್ಬರವಾಗಿ ಕೊಂದು ಬಳಿಕ ಅದನ್ನು ಅಮಾಯಕ ಮುಸ್ಲಿಮರ ತಲೆಗೆ ಕಟ್ಟಿದವರು, ಜೆಎನ್‌ಯುನಲ್ಲಿ ಪಾಕಿಸ್ತಾನ ಪರವಾಗಿ ಘೋಷಣೆಗಳನ್ನು ಕೂಗಿ ಬಳಿಕ, ಅದನ್ನು ಅಮಾಯಕ ವಿದ್ಯಾರ್ಥಿಗಳ ತಲೆಗೆ ಕಟ್ಟಿದವರು, ಗೋಧ್ರಾರೈಲಿಗೆ ಬೆಂಕಿ ಹಚ್ಚಿ, ಜನರನ್ನು ಆಕ್ರೋಷಿಸಿತರನ್ನಾಗಿ ಮಾಡಿ ಭಾರೀ ಹತ್ಯಾಕಾಂಡವೊಂದಕ್ಕೆ ಯಾಕೆ ಯೋಜನೆ ರೂಪಿಸಿರಬಾರದು? ಈ ಪ್ರಶ್ನೆಯನ್ನು ನಾವು ಮತ್ತೆ ಮತ್ತೆ ಕೇಳಿಕೊಳ್ಳಬೇಕಾದ ದಿನ ಹತ್ತಿರಬಂದಿದೆ. ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದವರು ಯಾರು ಎನ್ನುವುದರ ಕುರಿತಂತೆ ಹಲವು ಪ್ರಶ್ನೆಗಳು, ಅನುಮಾನಗಳು ನಮ್ಮ ನಡುವೆ ಉಳಿದುಕೊಂಡಿವೆಯಾದರೂ, ಬೆಂಕಿ ಹಚ್ಚಿದ ಆರೋಪದಲ್ಲಿ ಈಗಾಗಲೇ ನೂರಾರು ಜನ ಅಮಾಯಕ ಮುಸ್ಲಿಮರು ಜೈಲಲ್ಲಿ ಕೊಳೆಯುತ್ತಿದ್ದಾರೆ. ತನಗಾಗದವರನ್ನೆಲ್ಲ ಗೋಧ್ರಾ ದಹನದ ಆರೋಪದಲ್ಲಿ ಬಂಧಿಸಿ, ಗುಜರಾತ್ ಸರಕಾರ ಜೈಲಿಗೆ ತಳ್ಳಿತು. ಅವರ ತಲೆಗೆ ದೇಶದ್ರೋಹದ ಆರೋಪವನ್ನು ಕಟ್ಟಿತು. ಗುಜರಾತ್ ಹತ್ಯಾಕಾಂಡದಲ್ಲಿ ಆರೋಪಿಗಳಿಗೆ ಶಿಕ್ಷೆಯಾಯಿತೋ, ಬಿಟ್ಟಿತೋ ಆದರೆ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಆರೋಪದಲ್ಲಿ ಹಲವು ಅಮಾಯಕರು ಶಿಕ್ಷೆ ಅನುಭವಿಸಿದ್ದು ಸತ್ಯ.

ಪಾಟಿದಾರ್ ನಾಯಕರು ನೀಡುತ್ತಿರುವ ಹೇಳಿಕೆಯ ಹಿನ್ನೆಲೆಯಲ್ಲಿ, ಗೋಧ್ರಾ ರೈಲಿನಲ್ಲಿ ನಿಜಕ್ಕೂ ನಡೆದಿರುವುದು ಏನು ಎನ್ನುವುದರ ಕುರಿತಂತೆ ಮರು ತನಿಖೆಯೊಂದು ನಡೆಯಬೇಕಾದ ಅಗತ್ಯವಿದೆ. ರಾಜಕಾರಣಿಗಳು ಮತ್ತು ಸಂಘಪರಿವಾರದ ಕುತಂತ್ರಗಳು ಈ ದೇಶವನ್ನು ಅವನತಿಯ ಕಡೆಗೆ ಸಾಗಿಸುತ್ತಿರುವಾಗ ಗೋಧ್ರಾ ರೈಲು ದಹನದ ಹಿಂದಿರುವ ಸತ್ಯ ನಮಗೆ ಪಾಠವಾಗಬೇಕಾಗಿದೆ. ರಾಜಕಾರಣಿಗಳ ಕುತಂತ್ರದ ಕುರಿತಂತೆ ಸದಾ ಜಾಗೃತ ಮನಸ್ಸೊಂದು ನಮ್ಮಲ್ಲಿರಬೇಕು. ತಮ್ಮ ಲಾಭಕ್ಕಾಗಿ ಅವರು ಎಂತಹ ನೀಚ ಕೃತ್ಯಕ್ಕೂ ಇಳಿಯಬಲ್ಲರು ಎನ್ನುವುದಕ್ಕೆ ಗೋಧ್ರಾ ನಮಗೆ ಅತೀ ದೊಡ್ಡ ಉದಾಹರಣೆಯಾಗಿದೆ. ಇನ್ನೊಂದು ಗೋಧ್ರಾ ರೈಲು ದುರಂತವಾಗಲಿ, ಗುಜರಾತ್ ಹತ್ಯಾಕಾಂಡವಾಗಲಿ ನಡೆಯದಿರಬೇಕಾದರೆ, ರಾಜಕಾರಣಿಗಳು ಹರಡುವ ಸುಳ್ಳುಗಳಿಗೆ ಬಲಿಯಾಗದಂತೆ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು. ಗೋಧ್ರಾ ರೈಲಿನೊಳಗಿನ ಸತ್ಯ ಬೆಳಕಿಗೆ ಬರಬೇಕು. ಆದರೆ, ಯಾರು ಬೆಂಕಿ ಹಚ್ಚಿದರೆಂದು ನಾವು ಅನುಮಾನ ಪಡುತ್ತಿದ್ದೇವೆಯೋ ಅವರ ಕೈಯಲ್ಲೇ ಸರಕಾರವಿದೆ. ಹೀಗಿರುವಾಗ, ಸಾವಿರ ತನಿಖೆಗಳು ನಡೆದರೂ ಅದು ಆಳುವವರ ಮೂಗಿನ ನೇರಕ್ಕೇ ಇರುತ್ತದೆ ಎನ್ನುವುದನ್ನು ನಾವು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಈ ನಿಟ್ಟಿನಲ್ಲಿ ವಿರೋಧ ಪಕ್ಷಗಳು, ಸಾಮಾಜಿಕ ಸಂಘಟನೆಗಳು ಭಾರತವನ್ನು ಉಳಿಸುವುದಕ್ಕೆ ಸಂಘಟಿತವಾಗಬೇಕಾದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News