ಜೆಎನ್‌ಯು ಕಾರ್ಯಕ್ರಮವನ್ನು ವಾಸ್ತವದಲ್ಲಿ ಸಂಘಟಿಸಿದ್ದು ಕನ್ಹಯ್ಯ ಕುಮಾರ್:ಪೊಲೀಸ್

Update: 2016-02-24 12:52 GMT

ಹೊಸದಿಲ್ಲಿ,ಫೆ.24: ದೇಶದ್ರೋಹದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಕ್ಯಾಂಪಸ್‌ನಲ್ಲಿ ನಡೆದಿದ್ದ ವಿವಾದಾತ್ಮಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಷ್ಟೇ ಅಲ್ಲ,ವಾಸ್ತವದಲ್ಲಿ ಕಾರ್ಯಕ್ರಮವನ್ನು ಅವರೇ ಸಂಘಟಿಸಿದ್ದರು ಎಂದು ದಿಲ್ಲಿ ಪೊಲೀಸರು ಬುಧವಾರ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ದೇಶವಿರೋಧಿ ಘೋಷಣೆಗಳನ್ನು ಕೂಗಲಾಗಿತ್ತು ಎಂದು ಆರೋಪಿಸಲಾಗಿದೆ.

ನ್ಯಾ.ಪ್ರತಿಭಾ ರಾಣಿ ಅವರ ಮುಂದೆ ಸಲ್ಲಿಸಲಾದ 13 ಪುಟಗಳ ಸ್ಥಿತಿಗತಿ ವರದಿಯಲ್ಲಿ ಫೆ.9ರಂದು ಜೆಎನ್‌ಯುದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಕನ್ಹಯ್ಯಿ ಮತ್ತು ಇತರ ಒಂಬತ್ತು ಆರೋಪಿಗಳೊಂದಿಗೆ ತಮ್ಮ ಗುರುತು ಸಿಗದಂತೆ ಮುಖಗಳನ್ನು ಮುಚ್ಚಿಕೊಂಡಿದ್ದ ಕೆಲವು ‘‘ವಿದೇಶಿ ಶಕ್ತಿಗಳು’’ಸಹ ಭಾಗಿಯಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಅರ್ಜಿದಾರ ಕನ್ಹಯ್ಯ,ಆತನ ಸಹ ಆರೋಪಿಗಳು ಮತ್ತು ಈ ವಿದೇಶಿ ಶಕ್ತಿಗಳ ನಡುವಿನ ನಂಟಿನ ಕುರಿತು ತನಿಖಾ ಸಂಸ್ಥೆಯು ಪರಿಶೀಲಿಸುತ್ತಿದೆ ಎಂದು ವರದಿಯು ತಿಳಿಸಿದೆ.

ಜಾಮೀನು ಕೋರಿ ಕನ್ಹಯ್ಯ ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸಿದ ಪೊಲೀಸರು,ಜೆಎನ್‌ಯು ಕಾರ್ಯಕ್ರಮವು ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿಯೂ ಸಂಕೀರ್ಣ ಪರಿಣಾಮವನ್ನು ಬೀರಿದೆ ಎನ್ನುವುದು‘‘ಬಹಿರಂಗ ರಹಸ್ಯ’’ವಾಗಿದೆ. ತನಿಖೆಯ ಈ ಹಂತದಲ್ಲಿ ಅರ್ಜಿದಾರರಿಗೆ ಜಾಮೀನು ನೀಡಿದರೆ ಅದು ತನಿಖೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಲಿದೆ ಎಂದು ವಾದಿಸಿದರು.

ಖಾಸಗಿ ಸುದ್ದಿವಾಹಿನಿಯಿಂದ ತಾವು ಪಡೆದುಕೊಂಡಿರುವ ಘಟನೆಯ ಅಪರಿಷ್ಕೃತ ವೀಡಿಯೊ ಅರ್ಜಿದಾರ ಸೇರಿದಂತೆ ವಿವಿಧ ವರ್ಗಗಳ ನಡುವೆ ಚರ್ಚೆಯಾಗುತ್ತಿರುವ ‘‘ನಕಲಿ ವೀಡಿಯೊ’’ಅಲ್ಲ ಎಂದು ವರದಿಯಲ್ಲಿ ತಿಳಿಸಿರುವ ಪೊಲೀಸರು, ಅದು ಸಂಪೂರ್ಣವಾಗಿ ಭಿನ್ನವಾಗಿದ್ದು ಯಾವುದೇ ಪರಿಷ್ಕಾರಕ್ಕೊಳಪಟ್ಟಿಲ್ಲ, ಆದರೆ ಅದೊಂದೇ ತನಿಖೆಗೆ ಸಾಕ್ಷಾಧಾರವಾಗಿಲ್ಲ ಎಂದು ತಿಳಿಸಿದ್ದಾರೆ.

ತನ್ಮಧ್ಯೆ ನ್ಯಾಯಾಲಯವು ಕನ್ಹಯ್ಯಾ ಜಾಮೀನು ಅರ್ಜಿಯ ವಿಚಾರಣೆಯನ್ನು ಫೆ.29ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News