ಫರಂಗಿಪೇಟೆಯ ಇಬ್ಬರು ಯುವಕರು ಮೃತ್ಯು, ಮೂವರಿಗೆ ಗಾಯ

Update: 2016-02-24 17:52 GMT

ಬಂಟ್ವಾಳ/ಮಡಿಕೇರಿ, ಫೆ.24: ಮಡಿಕೇರಿ ಸಮೀಪದ ತಾಳತ್‌ಮನೆ ಎಂಬಲ್ಲಿ ಇಂದು ಅಪರಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಫರಂಗಿಪೇಟೆಯ ಇಬ್ಬರು ಮೃತಪಟ್ಟಿದ್ದು, ಇತರ ಮೂವರು ಗಂಭೀರ ಗಾಯಗೊಂಡಿದ್ದಾರೆ. ಫರಂಗಿಪೇಟೆ ಹತ್ತನೆ ಮೈಲುಗಲ್ಲು ನಿವಾಸಿ, ಪ್ರಸ್ತುತ ತುಂಬೆಯಲ್ಲಿ ವಾಸವಾಗಿರುವ ಸಾದಿಕ್ ಎಂಬವರ ಪುತ್ರ ಶಫೀಕ್(20) ಹಾಗೂ ಕುಂಪನಮಜಲು ನಿವಾಸಿ ಇಬ್ರಾಹೀಂ ಎಂಬವರ ಪುತ್ರ ಸಮೀರ್(21) ಮೃತಪಟ್ಟವರಾಗಿದ್ದಾರೆ. ಹತ್ತನೆ ಮೈಲುಗಲ್ಲು ನಿವಾಸಿಗಳಾದ ವಿ.ಎಚ್.ಅಶ್ವಾನ್(18), ಇರ್ಫಾನ್(19) ಹಾಗೂ ಕುಂಪನಮಜಲು ನಿವಾಸಿ ಸಮೀರ್(19) ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಐವರು ಸ್ನೇಹಿತರು ಬುಧವಾರ ಬೆಳಗ್ಗೆ ಐ10 ಕಾರಿನಲ್ಲಿ ಮಡಿಕೇರಿಗೆ ಪ್ರವಾಸ ತೆರಳಿದ್ದರು. ಇವರಿದ್ದ ಕಾರು ಅಪರಾಹ್ನದ ವೇಳೆ ತಾಳತ್‌ಮನೆ ಎಂಬಲ್ಲಿಗೆ ತಲುಪಿದಾಗ ಮಡಿಕೇರಿ ಕಡೆಯಿಂದ ಮಂಗಳೂರಿನತ್ತ ಬರುತ್ತಿದ್ದ ಟಿಪ್ಪರ್ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಶಫೀಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಮೀರ್ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತ ಶಫೀಕ್ ತುಂಬೆಯ ಅರಫಾ ಎಂಬ ಮರಳು ಸಾಗಾಟದ ಲಾರಿಯಲ್ಲಿ ರೈಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರೆ, ಸಮೀರ್ ಫರಂಗಿಪೇಟೆಯಲ್ಲಿರುವ ಸಂಬಂಧಿಕರ ರೆಡಿಮೇಡ್ ವಸ್ತ್ರಗಳ ಮಳಿಗೆಯಲ್ಲಿ ನೌಕರಿ ಮಾಡುತ್ತಿದ್ದರು. ಗಾಯಾಳುಗಳಾದ ವಿ.ಎಚ್.ಅಶ್ವಾನ್ ಮಂಗಳೂರಿನ ಬಿ.ಡಿ.ಪಿ.ಎಸ್. ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿದ್ದರೆ, ಇರ್ಫಾನ್ ಮಂಗಳೂರಿನ ನ್ಯಾಷನಲ್ ಟ್ಯುಟೋರಿಯಲ್‌ನಲ್ಲಿ ದ್ವಿತೀಯ ಪಿಯುಸಿ ಹಾಗೂ ಸಮೀರ್ ಕೊಣಾಜೆ ಪಿ.ಎ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದಾನೆ.
ಘಟನೆಯ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News