ಕೆಮಿಕಲ್ ಗೋದಾಮಿಗೆ ಬೆಂಕಿ: 20 ಲಕ್ಷ ರೂ. ನಷ್ಟ

Update: 2016-02-24 18:10 GMT

ಕುಂದಾಪುರ, ಫೆ.24: ಇಲ್ಲಿಗೆ ಸಮೀಪದ ಕೋಟೇಶ್ವರ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ದಾಮೋದರ್ ಕೆಮಿಕಲ್ ಇಂಡಸ್ಟ್ರಿಯ ಗೋದಾಮಿನಲ್ಲಿ ಬುಧವಾರ ಬೆಳಗ್ಗೆ 10:30ರ ಸುಮಾರಿಗೆ ಉಂಟಾದ ಬೆಂಕಿ ಆಕಸ್ಮಿಕದಿಂದ 20ಲಕ್ಷ ರೂ. ಅಧಿಕ ವೌಲ್ಯದ ಸೊತ್ತುಗಳು ಸುಟ್ಟುಹೋಗಿರುವ ಬಗ್ಗೆ ವರದಿಯಾಗಿದೆ.
ಈ ಕೈಗಾರಿಕೆ ಕುಂದಾಪುರದ ಯಜ್ಞೇಶ್ ಭಟ್ ಎಂಬವರಿಗೆ ಸೇರಿದಾಗಿದ್ದು, ಇಲ್ಲಿ ವಾಹನಗಳ ಬ್ರೇಕ್‌ಲೈನರ್‌ಗೆ ಬಳಸಲ್ಪಡುವ ಪ್ರಿಸ್ಟನ್ ಡಸ್ಟ್ ಎಂಬ ಕೆಮಿಕಲ್ ತಯಾರಿಸಲಾಗುತ್ತಿದೆ. ಈ ಕೈಗಾರಿಕೆಗೆ ಸಂಬಂಧಿಸಿದ ಅದರ ಹಿಂಬದಿಯಲ್ಲೇ ಇರುವ ಗೋದಾಮಿನಲ್ಲಿ ಈ ಅವಘಡ ಸಂಭವಿಸಿದೆ.
ಗೋದಾಮಿನಲ್ಲಿ ಶೇಖರಿಸಿಡಲಾಗಿದ್ದ ಕೆಮಿಕಲ್ ಸೂರ್ಯನ ಬಿಸಿಗೆ ಸ್ವಯಂ ದಹನಗೊಂಡು ಈ ದುರಂತ ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಗೋದಾಮಿನಲ್ಲಿದ್ದ ಒಟ್ಟು 1,500 ತಲಾ 25 ಕೆ.ಜಿ. ತೂಕದ ಕೆಮಿಕಲ್ ಬ್ಯಾಗ್ ಸಂಪೂರ್ಣ ಸುಟ್ಟು ಹೋಗಿವೆ. ಇದರ ಒಟ್ಟು ವೌಲ್ಯ ಸುಮಾರು 10ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಅದೇ ರೀತಿ ಗೋದಾಮಿನ ಗೋಡೆ, ಮೇಲ್ಛಾವಣಿ ಕೂಡ ಸಂಪೂರ್ಣ ಸುಟ್ಟು ಹೋಗಿದ್ದು, ಸುಮಾರು 10ಲಕ್ಷ ರೂ. ನಷ್ಟ ಸಂಭವಿಸಿದೆ.

ಮಾಹಿತಿ ತಿಳಿದು ಕುಂದಾಪುರ ಅಗ್ನಿಶಾಮಕ ದಳದ ಎರಡು ವಾಹನಗಳಲ್ಲಿ ಕೂಡಲೇ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಸಹಾಯಕ ಫೈಯರ್ ಆಫೀಸರ್ ನವೀನ್ ನೇತೃತ್ವದಲ್ಲಿ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಸುಮಾರು ಮೂರು ಗಂಟೆಗಳ ನಿರಂತರ ಶ್ರಮದ ಬಳಿಕ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು. ಸ್ಥಳಕ್ಕೆ ಕುಂದಾಪುರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News