ಮಂಗಳೂರು: ಕುದ್ಮುಲ್ ರಂಗರಾವ್ ಸ್ಮಾರಕ ಭವನಕ್ಕೆ ಶಿಲಾನ್ಯಾಸ

Update: 2016-02-24 18:10 GMT

ಮಂಗಳೂರು, ಫೆ.24: ನಗರದ ಅತ್ತಾವರದ ಬಾಬುಗುಡ್ಡೆಯಲ್ಲಿ 2 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕುದ್ಮುಲ್ ರಂಗರಾವ್ ಸ್ಮಾರಕ ಭವನಕ್ಕೆ ಇಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಸಾಮಾಜಿಕ ನ್ಯಾಯದಿಂದ ವಂಚಿತರಾದ ದುರ್ಬಲ ವರ್ಗದವರ ಪರವಾಗಿ, ಸಾಮಾಜಿಕ ಅಸಮಾನತೆ ದೂರ ಮಾಡುವ ನಿಟ್ಟಿನಲ್ಲಿ ಕುದ್ಮುಲ್ ರಂಗರಾವ್ ಪ್ರಾಮಾಣಿಕ ಕೆಲಸವನ್ನು ಮಾಡಿದ್ದಾರೆ. ಸಾಮಾಜಿಕ ವ್ಯವಸ್ಥೆಯನ್ನು ಹತ್ತಿರದಿಂದ ಕಂಡು ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಿದಂತಹ ವ್ಯಕ್ತಿ ಅವರಾಗಿದ್ದಾರೆ. ನಾವಿಂದು ಹಿಂದಿನ ಸಾಮಾಜಿಕ ಸ್ಥಿತಿಗತಿಗಳನ್ನು ಅರ್ಥೈಸಿಕೊಂಡು ಹಿಂದೆ ಅದನ್ನು ತೊಲಗಿಸಲು ಪ್ರಯತ್ನಪಟ್ಟವರನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ ಎಂದರು.

ಜನರು ಸಾಮಾಜಿಕ ಬದಲಾವಣೆಗೆ ತಕ್ಷಣ ಒಗ್ಗಿಕೊಳ್ಳುವುದಿಲ್ಲ. ಇಂದು ಮೀಸಲಾತಿಗೆ ಸಂಬಂಧಪಟ್ಟ ಚರ್ಚೆಗಳು ನಡೆಯುತ್ತಿದೆ. ನಾವಿಂದು ವಿವೇಚನೆ ಮಾಡುವ ಶಕ್ತಿಯನ್ನು ಕಳೆದುಕೊಂಡರೆ ದಾರಿ ತಪ್ಪಿಸುವ ಕೆಲಸವನ್ನು ಕೆಲವರು ಮಾಡುತ್ತಾರೆ. ಧರ್ಮ, ಜಾತಿ, ಭಾಷೆಯ ವಿಚಾರಗಳನ್ನಿಟ್ಟುಕೊಂಡು ಜನರನ್ನು ಮರುಳು ಮಾಡುವಂತಹ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜೆ.ಆರ್. ಲೋಬೊ, 2005ರಲ್ಲಿ ಕುದ್ಮುಲ್ ರಂಗರಾವ್ ಸ್ಮಾರಕ ಸಭಾಭವನಕ್ಕೆ ಶಿಲಾನ್ಯಾಸ ನೆರ ವೇರಿಸಲಾಗಿದ್ದರೂ ಹಲವಾರು ಕಾರಣಗಳಿಂದ ಇದರ ಕೆಲಸ ನಡೆದಿರಲಿಲ್ಲ. ಸಚಿವ ಆಂಜನೇಯ ಮುತುವರ್ಜಿಯಿಂದ 1 ಕೋ.ರೂ. ಅನುದಾನ ಬಿಡು ಗಡೆ ಮಾಡಿರುವ ಹಿನ್ನೆಲೆಯಲ್ಲಿ ಇದರ ಕಾಮಗಾರಿ ಆರಂಭವಾಗಿದೆ. 15 ತಿಂಗಳೊಳಗೆ ಭವನ ಸಾರ್ವ ಜನಿಕರ ಬಳಕೆಗೆ ಸಿಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮನಪಾ ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್, ಮನಪಾ ಸ್ಥಾಯಿ ಸಮಿತಿಯ ಅಧ್ಯಕ್ಷ ಪ್ರಕಾಶ್, ಮನಪಾ ಸದಸ್ಯರಾದ ಶೈಲಜಾ, ರಜನೀಸ್, ಜಿಲ್ಲಾ ಕಾಂಗ್ರೆಸ್ ಮುಖಂಡ ಟಿ.ಕೆ.ಸುಧೀರ್, ಜಯಂತ ಪೂಜಾರಿ, ವಿಜಯಲಕ್ಷ್ಮೀ ಹೊನ್ನಯ್ಯ ಟಿ., ಅರುಣ್ ಕೊಯಲ್ಲೋ, ಪಾಂಡುರಂಗ ಶೆಟ್ಟಿ, ಕಿರಣ್‌ಕುಮಾರ್, ಹೃದಯನಾಥ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News