ನವೋದಯ ಟ್ರಸ್ಟ್‌ಗೆ ‘ನಬಾರ್ಡ್ ಪ್ರಶಸ್ತಿ’

Update: 2016-02-24 18:10 GMT

ಮಂಗಳೂರು, ಫೆ.24: ಮಹಿಳಾ ಸಬಲೀಕರಣಕ್ಕೆ ಆದ್ಯತೆಯನ್ನು ನೀಡಿ ಗ್ರಾಮಾಂತರ ಪ್ರದೇಶಗಳಲ್ಲಿ ಸ್ವ-ಸಹಾಯ ಸಂಘಗಳನ್ನು ಸಂಘಟಿಸುತ್ತಿರುವ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಸಾರಥ್ಯದ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ‘ನಬಾರ್ಡ್ ರಾಜ್ಯ ಪ್ರಶಸ್ತಿ’ಗೆ ಪಾತ್ರವಾಗಿದೆ.

 ನಬಾರ್ಡ್ ಕರ್ನಾಟಕ ರಾಜ್ಯದಲ್ಲಿ ಸ್ವ-ಸಹಾಯ ಸಂಘಗಳ ನಿರ್ವ ಹಣೆಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿರುವ ಸ್ವಯಂ ಸೇವಾ ಸಂಸ್ಥೆಗಳ ಅತ್ಯುತ್ತಮ ಸಾಧನೆಗೆ ನೀಡುವ 2013-14 ಮತ್ತು 2014- 15ನೆ ಸಾಲಿನ ಪ್ರಥಮ ಪ್ರಶಸ್ತಿಯನ್ನು ನವೋದಯ ಟ್ರಸ್ಟ್ ತನ್ನದಾಗಿಸಿಕೊಂಡಿದೆ.
 14 ವರ್ಷಗಳಿಂದ ನವೋದಯ ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಧಾರವಾಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸ್ವ-ಸಹಾಯ ಗುಂಪುಗಳ ರಚನೆ ಮತ್ತು ಸಮರ್ಪಕ ನಿರ್ವಹಣೆಯೊಂದಿಗೆ ಗ್ರಾಮೀಣ ಜನರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಸ್ವ ಉದ್ಯೋಗಕ್ಕೆ ಪ್ರೇರಣೆ ನೀಡಿ, ಸೂಕ್ತ ತರಬೇತಿಯನ್ನು ನೀಡುತ್ತಿರುವ ನವೋದಯ ಟ್ರಸ್ಟ್ ಸದಸ್ಯರ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಒದಗಿಸುವಲ್ಲೂ ಕಾರ್ಯ ನಿರ್ವಹಿಸುತ್ತಿದೆ.
ಟ್ರಸ್ಟ್ ಈಗಾಗಲೇ ಅವಿಭಜಿತ ದ.ಕ. ಜಿಲ್ಲೆಯಲ್ಲಿ 23,349, ಉತ್ತರ ಕನ್ನಡ ಜಿಲ್ಲೆಯಲ್ಲಿ 4,209, ಶಿವಮೊಗ್ಗ ಜಿಲ್ಲೆಯಲ್ಲಿ 1,658 ಹಾಗೂ ಧಾರವಾಡ ಜಿಲ್ಲೆಯಲ್ಲಿ 1,593 ಸೇರಿ 30,809 ನವೋದಯ ಸ್ವ-ಸಹಾಯ ಸಂಘಗಳನ್ನು ರಚಿಸಿದ್ದು, 3,14,109 ಮಂದಿ ಸದಸ್ಯರಿದ್ದಾರೆ. ಈ ಗುಂಪುಗಳ ಒಟ್ಟು ಉಳಿತಾಯ 121 ಕೋಟಿ ರೂ.ಗಳಾಗಿವೆ.
 ಟ್ರಸ್ಟ್ ಈ ಹಿಂದೆ 2006-07, 2007-08, 2008-09 ಹಾಗೂ 2012-13ನೆ ಸಾಲಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಅತ್ಯುತ್ತಮ ಸ್ವಯಂ ಸೇವಾ ಸಂಸ್ಥೆಯೆಂಬ ನಬಾರ್ಡ್ ಪ್ರಶಸ್ತಿಯನ್ನು ಗಳಿಸಿದ್ದು, ಇದೀಗ 2013-14 ಮತ್ತು 2014-15ನೆ ಸಾಲಿನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಮಾರ್ಚ್ 2ರಂದು ಬೆಂಗಳೂರಿನಲ್ಲಿ ನಬಾರ್ಡ್ ಪ್ರಾದೇಶಿಕ ಕಚೇ ರಿಯ ಸಭಾಂಗಣದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನವೋದಯ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಪ್ರಶಸ್ತಿಯನ್ನು ಸ್ವೀಕರಿಸಲಿರುವರು ಎಂದು ಟ್ರಸ್ಟ್‌ನ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News