ಉತ್ತರಕೊರಿಯ ವಿರುದ್ಧ ದಿಗ್ಬಂಧನಕ್ಕೆ ಚೀನಾ, ಅಮೆರಿಕ ನಡುವೆ ಸಹಮತ!
Update: 2016-02-25 16:57 IST
ವಿಶ್ವಸಂಸ್ಥೆ: ಉತ್ತರ ಕೊರಿಯ ಇತ್ತೀಚೆಗೆ ನಡೆಸಿರುವ ಪರಮಾಣು ಪರೀಕ್ಷೆಯ ಹಿನ್ನೆಲೆಯಲ್ಲಿ ಅದರ ವಿರುದ್ಧ ನಿರ್ಬಂಧ ಹೇರುವ ಕುರಿತು ಅಮೆರಿಕ ಹಾಗೂ ಚೀನಾ ಸಹಮತಕ್ಕೆ ಬಂದಿವೆ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಮೂಲಗಳು ಉತ್ತರ ಕೊರಿಯ ವಿರುದ್ಧ ದಿಗ್ಬಂಧನ ಹೇರುವ ಕುರಿತು ಚೀನ ಹಾಗೂ ಅಮೆರಿಕಗಳ ನಡುವೆ ಸಹಮತ ವ್ಯಕ್ತವಾಗಿದೆ. ಶೀಘ್ರದಲ್ಲಿ ಈ ವಿಷಯದ ಪ್ರಸ್ತಾವವನ್ನು ಭದ್ರತಾ ಸಮಿತಿಯ ಮುಂದೆ ಇರಿಸಲಾಗುವುದು ಎಂದು ತಿಳಿಸಿವೆ.
ಉತ್ತರ ಕೊರಿಯ ಕಳೆದ ಜನವರಿಯಲ್ಲಿ ಪರಮಾಣು ಪರೀಕ್ಷೆ ನಡೆಸಿದ ನಂತರ ಇವೆರಡೂ ರಾಷ್ಟ್ರಗಳು ಅದರ ವಿರುದ್ಧ ದಿಗ್ಬಂಧನ ಹೇರುವ ಕುರಿತು ಸಹಮತ ಹೊಂದುವುದಕ್ಕೆ ಪ್ರಯತ್ನವನ್ನು ನಡೆಸಿತ್ತು. ಈ ಹೆಜ್ಜೆಯನ್ನು ಮುಂದಿಡಲು ಉಭಯ ರಾಷ್ಟ್ರಗಳು ಸಿದ್ಧವಾಗಿದ್ದು, ಈ ಮೊದಲು ಕೆಲವು ವಿಷಯಗಳಲ್ಲಿ ಅವುಗಳ ನಡುವೆ ಅಸಹಮತವಿತ್ತು. ಈಗೆಲ್ಲವೂ ಸರಿಯಾಗಿದೆ ಎಂದು ಭದ್ರತಾ ಸಮಿತಿಯ ಹಿರಿಯ ರಾಜತಾಂತ್ರಿಕರೊಬ್ಬರು ತಿಳಿಸಿದ್ದಾರೆ.