ರಣಜಿ ಫೈನಲ್: ಮುಂಬೈಗೆ ಅಲ್ಪ ಮುನ್ನಡೆ

Update: 2016-02-25 18:08 GMT

ಶ್ರೇಯಸ್‌ಗೆ ಶತಕದ ಸಂಭ್ರಮ

ಪುಣೆ, ಫೆ.25: ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಐಯ್ಯರ್‌ರ ಶತಕದ ಸಹಾಯದಿಂದ ಮುಂಬೈ ತಂಡ ರಣಜಿ ಟ್ರೋಫಿ ಫೈನಲ್‌ನಲ್ಲಿ ಸೌರಾಷ್ಟ್ರ ತಂಡದ ವಿರುದ್ಧ ಅಲ್ಪ ಮುನ್ನಡೆ ಸಾಧಿಸಿದೆ.

ಗುರುವಾರ ನಡೆದ ರಣಜಿ ಟ್ರೋಫಿಯ 2ನೆ ದಿನದಾಟದಲ್ಲಿ 142 ಎಸೆತಗಳನ್ನು ಎದುರಿಸಿದ ಐಯ್ಯರ್ 15 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಸಿಡಿಸಿ 117 ರನ್ ಗಳಿಸಿದರು. ಏಕಾಂಗಿ ಹೋರಾಟ ನೀಡುವುದರೊಂದಿಗೆ ಮುಂಬೈ 8 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಲು ನೆರವಾದರು.

ಕೇವಲ 2 ವಿಕೆಟ್ ಹೊಂದಿರುವ ಮುಂಬೈ 27 ರನ್ ಮುನ್ನಡೆಯಲ್ಲಿದೆ. ಐಯ್ಯರ್‌ರಲ್ಲದೆ ಸೂರ್ಯಕುಮಾರ್ ಯಾದವ್(48) ಮುಂಬೈ ಪರ ಮಹತ್ವದ ಕಾಣಿಕೆ ನೀಡಿದರು.

ಈ ಇಬ್ಬರು 3ನೆ ವಿಕೆಟ್‌ಗೆ 152 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ದಿನದಾಟದಂತ್ಯಕ್ಕೆ ಸಿದ್ದೇಶ್ ಲಾಡ್(22) ಹಾಗೂ ಇಕ್ಬಾಲ್ ಅಬ್ದುಲ್ಲಾ(9) ಕ್ರೀಸ್ ಕಾಯ್ದುಕೊಂಡಿದ್ದಾರೆ.

 ಸೌರಾಷ್ಟ್ರದ ಪರ ಎಡಗೈ ವೇಗಿದ್ವಯರಾದ ಹಾರ್ದಿಕ್ ರಾಥೋಡ್(3-44) ಹಾಗೂ ಜಯದೇವ್ ಉನದ್ಕಟ್(2-55)ಐದು ವಿಕೆಟ್‌ಗಳನ್ನು ಹಂಚಿಕೊಂಡರು. ಬಲಗೈ ವೇಗದ ಬೌಲರ್ ಚಿರಾಗ್ ಜಾನಿ(2-46) ಎರಡು ವಿಕೆಟ್ ಉಡಾಯಿಸಿದರು.

ಇದಕ್ಕೆ ಮೊದಲು 8 ವಿಕೆಟ್ ನಷ್ಟಕ್ಕೆ 192 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಸೌರಾಷ್ಟ್ರ ತಂಡ ಕೇವಲ 43 ರನ್ ಸೇರಿಸಿ 93.2 ಓವರ್‌ಗಳಲ್ಲಿ 235 ರನ್‌ಗೆ ಆಲೌಟಾಯಿತು.

ಚೊಚ್ಚಲ ಪಂದ್ಯವನ್ನು ಆಡಿದ್ದ ಪ್ರೇರಕ್ ಮಂಕಡ್(66) ಬುಧವಾರದ ಮೊತ್ತಕ್ಕೆ 11 ರನ್ ಸೇರಿಸಿ ಧವಲ್ ಕುಲಕರ್ಣಿಗೆ ವಿಕೆಟ್ ಒಪ್ಪಿಸಿದರು.

ಕೆಳ ಕ್ರಮಾಂಕದಲ್ಲಿ ಜೈದೇವ್ ಉನದ್ಕಟ್ 26 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್‌ಗಳನ್ನು ಒಳಗೊಂಡ 31 ರನ್ ಗಳಿಸಿದರು. ಕುಲಕರ್ಣಿ(5-42) ಐದು ವಿಕೆಟ್ ಗೊಂಚಲು ಪಡೆದು ಗಮನ ಸೆಳೆದರು. ಶಾರ್ದೂಲ್ ಠಾಕೂರ್(3-89) 3 ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್

ಸೌರಾಷ್ಟ್ರ ಪ್ರಥಮ ಇನಿಂಗ್ಸ್: 93.2 ಓವರ್‌ಗಳಲ್ಲಿ 235 ರನ್‌ಗೆ ಆಲೌಟ್

(ವಸವಾಡ 77, ಪ್ರೇರಕ್ ಮಂಕಡೆ 66, ಉನದ್ಕಟ್ 31, ಕುಲಕರ್ಣಿ 5-42, ಠಾಕೂರ್ 3-89)

ಮುಂಬೈ ಪ್ರಥಮ ಇನಿಂಗ್ಸ್: 66 ಓವರ್‌ಗಳಲ್ಲಿ 262/8

(ಶ್ರೇಯಸ್ ಅಯ್ಯರ್ 117, ಸೂರ್ಯಕುಮಾರ್ ಯಾದವ್ 48, ಸಿದ್ದೇಶ್ ಲಾಡ್ ಔಟಾಗದೆ 22, ಹಾರ್ದಿಕ್ ರಾಥೋಡ್ 3-44, ಉನದ್ಕಟ್ 2-55)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News