×
Ad

ಶೇರು ಮಾರುಕಟ್ಟೆಯಲ್ಲಿ ಉತ್ಸಾಹ ತುಂಬುವಲ್ಲಿ ರೈಲ್ವೆ ಬಜೆಟ್ ವಿಫಲ,113 ಅಂಶ ಕುಸಿದ ಸೆನ್ಸೆಕ್ಸ್

Update: 2016-02-25 23:47 IST

ಮುಂಬೈ,ಫೆ.25: 2016ರ ರೈಲ್ವೆ ಮುಂಗಡಪತ್ರದಲ್ಲಿ ಪ್ರಕಟಿಸಲಾಗಿರುವ ಯೋಜನಾ ಗಾತ್ರದಲ್ಲಿ ಶೇ.21ರಷ್ಟು ಏರಿಕೆ ಗುರುವಾರ ಶೇರು ಮಾರುಕಟ್ಟೆಗಳಲ್ಲಿ ಯಾವುದೇ ಉತ್ಸಾಹವನ್ನು ಮೂಡಿಸಿಲ್ಲ. ಮುಂಬೈ ಶೇರು ವಿನಿಮಯ ಕೇಂದ್ರ(ಬಿಎಸ್‌ಇ)ದ ಸೂಚ್ಯಂಕ ದಿನದ ಅಂತ್ಯಕ್ಕೆ 112.93 ಅಂಶಗಳಷ್ಟು ಕುಸಿದು, 22,976ಕ್ಕೆ ಇಳಿದಿದೆ.

ಮೂಲಾಧಾರಿತ ಮಾರುಕಟ್ಟೆಯಲ್ಲಿ ಫೆಬ್ರವರಿ ತಿಂಗಳ ಗುತ್ತಿಗೆಗಳು ಚುಕ್ತಾ ಆಗುತ್ತಿರುವ ಹಿನ್ನೆಲೆಯೂ ಶೇರು ವ್ಯವಹಾರಸ್ಥರ ಮೇಲೆ ಪರಿಣಾಮ ಬೀರಿದ್ದು ಕೂಡ ಮಾರುಕಟ್ಟೆ ಕುಸಿತಕ್ಕೆ ಕಾರಣವಾಯಿತು ಎನ್ನುವುದು ಪೇಟೆಯಲ್ಲಿನ ಮಾತು. ಅತ್ತ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ(ಎನ್‌ಎಸ್‌ಇ)ದ ಸೂಚ್ಯಂಕ ಕೂಡ 48.10 ಅಂಶಗಳಷ್ಟು ಪತನಗೊಂಡು ದಿನದಂತ್ಯಕ್ಕೆ 6970.60ರಲ್ಲಿ ಅಂತ್ಯಗೊಂಡಿದೆ.
ರೈಲ್ವೆ ಕ್ಷೇತ್ರಕ್ಕೆ ಸಂಬಂಧಿಸಿದ ಶೇರುಗಳು ತೀವ್ರ ಹಿನ್ನಡೆಯನ್ನು ಕಂಡವು. ಬೆಮೆಲ್,ಕೆರ್ನೆಕ್ಸ್ ಮೈಕ್ರೋಸಿಸ್ಟಮ್ಸ್,ಟಿಟಾಘರ ವ್ಯಾಗನ್ಸ್ ಮತ್ತು ಕಾಲಿಂದಿ ರೇಲ್ ನಿರ್ಮಾಣ್ ಶೇ.5ಕ್ಕೂ ಅಧಿಕ ಕುಸಿತ ದಾಖಲಿಸಿದವು.

ಖರ್ಚು ಜಾಸ್ತಿ, ಲಾಭ ಕಡಿಮೆ
ಹೊಸದಿಲ್ಲಿ, ಫೆ. 25: ಹಾಲಿ ಹಣಕಾಸು ವರ್ಷದಲ್ಲಿ ರೈಲ್ವೆಯ ಆಪರೇಟಿಂಗ್ ರೇಶಿಯೊ (ಹಣ ಖರ್ಚು ಮಾಡುವ ಅನುಪಾತ) ಉದ್ದೇಶಿತ ಶೇ. 88.5 ರ ಬದಲು ಶೇ. 90 ಆಗಿರುತ್ತದೆ ಎಂದು 2016-17ರ ರೈಲ್ವೆ ಬಜೆಟ್ ಮಂಡಿಸಿದ ರೈಲ್ವೆ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.
 ಇದನ್ನು ಸರಳ ಮಾತುಗಳಲ್ಲಿ ಹೇಳುವುದಾದರೆ, ರೈಲ್ವೆಯು ಗಳಿಸುವ ಆದಾಯದ ಪ್ರತಿ ಒಂದು ರೂಪಾಯಿಯಲ್ಲಿ 90 ಪೈಸೆಯನ್ನು ಖರ್ಚು ಮಾಡುತ್ತದೆ. ಆಪರೇಟಿಂಗ್ ಅನುಪಾತ ಕಡಿಮೆ ಇದ್ದಷ್ಟು ಲಾಭಾಂಶ ಜಾಸ್ತಿ. 2016-17ರ ಆರ್ಥಿಕ ವರ್ಷದಲ್ಲಿ, ರೈಲ್ವೇಸ್‌ನ ಆಪರೇಟಿಂಗ್ ಅನುಪಾತ ಶೇ.92ಕ್ಕೆ ಏರಲಿದೆ. ಏಳನೆ ವೇತನ ಆಯೋಗದ ಪರಿಣಾಮವೇ ಇದಕ್ಕೆ ಕಾರಣ. 26 ಲಕ್ಷ ರೈಲ್ವೆ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಒಟ್ಟು 28,450 ಕೋಟಿ ರೂ.ನಷ್ಟು ವೇತನ ಏರಿಕೆ ಮಾಡುವಂತೆ ಆಯೋಗ ಶಿಫಾರಸು ಮಾಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News