ಸಾಮಾಜಿಕ ಸಾಮರಸ್ಯಕ್ಕಾಗಿ ‘ಎಗ್ರೆಸ್ಸಿವ್’ ಆಗಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಸಚಿವ ರೈ ಕರೆ

Update: 2016-02-26 14:33 GMT

ಮಂಗಳೂರು, ಫೆ.26: ಸಾಮಾಜಿಕ ಸಾಮರಸ್ಯವನ್ನು ಕಾಪಾಡುವುದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರು ‘ಎಗ್ರೆಸ್ಸಿವ್’ ಆಗಬೇಕು ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

  ಅವರು ಇಂದು ನಗರದ ಬಲ್ಮಠ ಶಾಂತಿನಿಲಯದಲ್ಲಿ ನಡೆದ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ವಿಜೇತ ಕಾಂಗ್ರೆಸ್ ಪಕ್ಷದ ಸದಸ್ಯರ ಅಭಿನಂದನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹಾಗೂ ಜಿಪಂ-ತಾಪಂ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಗಳ ಕಾಲು ಮುಟ್ಟಿ ಬೇಡುತ್ತೇನೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವ ಕೆಲಸ ಮಾಡಬೇಡಿ.ಸರಕಾರದ ಯೋಜನೆಗಳನ್ನು ಬಡವರ ಮನೆ ಬಾಗಿಲಿಗೆ ತಲುಪಿಸಿ ಎಂದು ಸಚಿವ ರೈ ನುಡಿದರು.

  ಪ್ರಸಕ್ತ ಕಾಂಗ್ರೆಸ್ ಮೀಸಲಾತಿ ತರುವ ಮೂಲಕ ಜಿಲ್ಲಾ ಪಂಚಾಯತ್‌ನಲ್ಲಿ ಹಿಂಬಾಗಿಲಿನಲ್ಲಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತದೆ ಎಂದು ಆರೋಪ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಾಡುತ್ತಿದ್ದಾರೆ. ಅವರ ಪಕ್ಷ ಅಧಿಕಾರದಲ್ಲಿದ್ದಾಗ ಏನು ಮಾಡಿತ್ತು ಎಂಬುದನ್ನು ಈಗ ಅವರೇ ಬಹಿರಂಗಪಡಿಸುತ್ತಿದ್ದಾರೆ. ರಾಜ್ಯದಲ್ಲಿ ಹೇಗೆ ಆಡಳಿತ ನಡೆಸಬೇಕು ಎಂದು ಬಿಜೆಪಿಯವರಿಂದ ಪಾಠ ಕಲಿಯಬೇಕಾಗಿಲ್ಲ ರೈ ಕಿಡಿಯಾದರು.

   ರಮಾನಾಥ ರೈ ಬಂಟ್ವಾಳದ ಸಚಿವರು ಎಂದು ಟೀಕೆ ಮಾಡುವವರು ಸಚಿವರಾಗಿದ್ದಾಗ ಕಾಲಿಡದ ಜಿಲ್ಲೆಯಲ್ಲಿ ವಿವಿಧ ಪ್ರದೇಶಗಳಿಗೆ ನಾನು ಬೇಟಿ ನೀಡಿದ್ದೇನೆ. ಜನರು ಕರೆದಾಗ ಮಧ್ಯರಾತ್ರಿಯವರೆಗೂ ಕ್ಷೇತ್ರಗಳ ಕಾರ್ಯಕ್ರಮಗಳಿಗೆ ಭಾಗವಹಿಸಿದ್ದೇನೆ. ಮರಳು ಮಾಫಿಯಾ ಬಗ್ಗೆ ಕಾಂಗ್ರೆಸ್ ವಿರುದ್ಧ ಆರೋಪ ಮಾಡುವ ಕೃಷ್ಣ ಪಾಲೆಮಾರ್ ಭೂ ಮಾಫಿಯಾ, ಮರಳು ಮಾಫಿಯಾದ ಮೂಲಕ ರಾಜಕೀಯ ಮಾಡಿದ್ದಾರೆ. ಸದನದಲ್ಲಿ ಏನು ಮಾಡಿದ್ದಾರೆ ಎಂದು ನಾನು ನಿಮಗೆ ಹೇಳಬೇಕಾಗಿಲ್ಲ ಎಂದು ವ್ಯಂಗ್ಯವಾಡಿದರು.

   ಶಿರಾಡಿ ಘಾಟಿಗೆ ಬಿಡುಗಡೆಯಾದ ಅನುದಾನವನ್ನು ಮೊದಲು ವಿನಿಯೋಗಿಸಿ ಕಾಮಗಾರಿ ಪೂರ್ತಿಗೊಳಿಸಿದ ಬಳಿಕ ಸಂಸದ ನಳಿನ್ ಕುಮಾರ್ ಹೇಳಿಕೆ ನೀಡಲಿ ಎಂದು ರಮಾನಾಥ ರೈ ಬಿಜೆಪಿ ಮುಖಂಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

      ಯಾವುದೇ ಮತೀಯವಾದಿ ಶಕ್ತಿಗಳ ಜೊತೆ ಕಾಂಗ್ರೆಸ್ ಪಕ್ಷವು ರಾಜಿ ಮಾಡಿ ಕೊಂಡಿಲ್ಲ. ದೇಶದ ಜಾತ್ಯತೀತ ಪರಂಪರೆಯನ್ನು ರಕ್ಷಿಸಲು ಚುನಾಯಿತ ಪ್ರತಿನಿಧಿಗಳು ಇನ್ನಷ್ಟು ಕ್ರೀಯಾಶೀಲರಾಗಬೇಕು ಎಂದು ಸಚಿವರು ನುಡಿದರು.

            ದೇಶದಲ್ಲಿ ಮಾಜಿ ಪ್ರಧಾನಿ ದಿವಂಗತ ರಾಜೀವ ಗಾಂಧಿಯವರು ಪಂಚಾಯತ್ ರಾಜ್ ಮಸೂದೆಯನ್ನು ಜಾರಿಗೆ ತರಲು ಹೊರಟಾಗ ವಿರೋಧಿಸಿದ ಬಿಜೆಪಿಯವರು ಇಂದು ಪಂಚಾಯತ್ ರಾಜ್ ಬಗ್ಗೆ ಆತ್ಮ ವಂಚನೆಯ ಮಾತುಗಳನ್ನಾಡುತ್ತಿದ್ದಾರೆ. ಜನರನ್ನು ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣವಾದಾಗ ಬಂಡವಾಳ ಶಾಹಿಗಳ ಪರವಾಗಿ ಬಿಜೆಪಿಯವರು ನಿಂತರು.ಕಾಂಗ್ರೆಸ್ ಯಾವತ್ತೂ ಬಂಡವಾಳಶಾಹಿಗಳ, ಶ್ರೀಮಂತರ ಪರವಾಗಿ ನಿಂತಿಲ್ಲ,ಬದಲಾಗಿ ಎಲ್ಲಾ ಜಾತಿ,ಧರ್ಮದ ಬಡವರ ಪರವಾಗಿ ನಿಂತಿದೆ. ಆದರೆ ಬಿಜೆಪಿ, ಸಂಘಪರಿವಾರ ಗೊಬೆಲ್ ಮಾದರಿಯಲ್ಲಿ ಸುಳ್ಳನ್ನೇ ಸಾವಿರ ಸಲ ಹೇಳಿ ಸತ್ಯವೆಂದು ಜನರನ್ನು ನಂಬಿಸುತ್ತಾ ದೇಶದಲ್ಲಿ ಅಧಿಕಾರ ಹಿಡಿದಿದ್ದಾರೆ. ಜಯಪ್ರಕಾಶ್ ನಾರಾಯಣರ ಚಳವಳಿಯ ಲಾಭವನ್ನು ಬಿಜೆಪಿ ಈ ರೀತಿ ಪಡೆದುಕೊಂಡಿದ್ದಾರೆ. ಜನಲೋಕಪಾಲ ವಿಚಾರದಲ್ಲಿ ಅಣ್ಣಾ ಹಝಾರೆಯವರ ಹೋರಾಟದ ಪ್ರಯೋಜನವನ್ನು ಬಳಸಿಕೊಳ್ಳಲು ನೋಡಿದ್ದಾರೆ. ಆದರೆ ಕೇಜ್ರಿವಾಲ್ ಅವರಿಗೆ ತಡೆಯಾದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಗಣನೀಯವಾಗಿ ಇಳಿಕೆಯಾಗಿದ್ದರೂ ದೇಶದಲ್ಲಿ ಪೆಟ್ರೋಲ್ ಬೆಲೆ ಅದೇ ಪ್ರಮಾಣದಲ್ಲಿ ಇಳಿಕೆಯಾಗಿಲ್ಲ ಎಂದು ರೈ ಕಿಡಿಕಾರಿದರು.

ವೇದಿಕೆಯಲ್ಲಿ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್, ಶಾಸಕರಾದ ಪ್ರತಾಪ್ ಚಂದ್ರ ಶೆಟ್ಟಿ, ಐವನ್ ಡಿಸೋಜ, ಜೆ.ಆರ್.ಲೋಬೊ, ಮನಪಾ ಮೇಯರ್ ಜೆಸಿಂತಾ ವಿಜಯ ಅಲ್ಫ್ರೆಡ್, ಪುರುಷೋತ್ತಮ ಚಿತ್ರಾಪುರ, ಕಾಂಗ್ರೆಸ್ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಕೆ.ಎಸ್.ಮುಹಮ್ಮದ್ ಮಸೂದ್, ಪಿ.ವಿ.ಮೋಹನ್, ಬಿ.ಎಚ್.ಖಾದರ್, ಶಶಿಧರ ಹೆಗ್ಡೆ,ಎ.ಸಿ.ಭಂಡಾರಿ, ಪದ್ಮನಾಭ ನರಿಂಗಾನ, ಡಾ.ರಘು, ಮಮತಾ ಗಟ್ಟಿ, ಮಿಥುನ್ ರೈ,ಎನ್.ಎಸ್.ಕರೀಂ,ಧರಣೇಂದ್ರ ಕುಮಾರ್, ಕಣಚೂರು ಮೋನು ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭ ತಾಪಂ, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಗಳನ್ನು ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News