×
Ad

ಆರೋಪಿ ವಕೀಲರಿಗೆ ಸುಪ್ರೀಂ ನೋಟಿಸ್: ಪಟಿಯಾಲ ಹೌಸ್ ಹಿಂಸಾಚಾರ

Update: 2016-02-26 23:56 IST

ಹೊಸದಿಲ್ಲಿ, ಫೆ.26: ದೇಶದ್ರೋಹದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಜೆಎನ್‌ಯು ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯಾ ಕುಮಾರ್‌ನ ವಿಚಾರಣೆಯ ವೇಳೆ ಕಳೆದ ವಾರ ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಹಿಂಸೆಯ ನಾಯಕತ್ವ ವಹಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ಮೂವರು ವಕೀಲರಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಪ್ರಕರಣದ ಕುರಿತು ವಿಶೇಷ ತನಿಖೆ ತಂಡವೊಂದರಿಂದ ತನಿಖೆ ನಡೆಯಬೇಕು ಹಾಗೂ ಮೂವರು ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ನಡೆಸಬೇಕೆಂದು ಆಗ್ರಹಿಸಿರುವ ಮನವಿಯೊಂದರ ಸಂಬಂಧ ಕೇಂದ್ರ ಸರಕಾರ ಹಾಗೂ ದಿಲ್ಲಿ ಪೊಲೀಸ್‌ನ ಪ್ರತಿಕ್ರಿಯೆಯನ್ನು ಅದು ಕೇಳಿದೆ.

ವಕೀಲರಾದ ವಿಕ್ರಂ ಚೌಹಾಣ್, ಯಶಪಾಲ್ ಸಿಂಗ್ ಹಾಗೂ ಓಂ ಶರ್ಮಾ ಎಂಬವರು ಕನ್ಹಯ್ಯ, ಜೆಎನ್‌ಯು ವಿದ್ಯಾರ್ಥಿಗಳು,ಪ್ರಾಧ್ಯಾಪಕರು ಹಾಗೂ ಪತ್ರಕರ್ತರ ಮೇಲಿನ ಹಲ್ಲೆಯ ನೇತೃತ್ವ ವಹಿಸಿದ್ದುದು ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ.

ಈ ಮೂವರು ವಕೀಲರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಕಳುಹಿಸಲಾಗಿತ್ತು. ಬೇರೆ ಬೇರೆ ದಿನ ಅವರನ್ನು ಔಪಚಾರಿತವಾಗಿ ಬಂಧಿಸಿ ತಕ್ಷಣವೇ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ವಕೀಲರು ಹಲ್ಲೆಯ ಬಗ್ಗೆ ಕೊಚ್ಚಿಕೊಂಡುದು ‘ಇಂಡಿಯಾ ಟುಡೇ’ ಟಿವಿ ನಡೆಸಿದ್ದ ಕುಟುಕು ಕಾರ್ಯಾಚರಣೆಯಲ್ಲಿ ದಾಖಲಾಗಿದೆ.

ಫೆ.15 ಹಾಗೂ 17ರಂದು ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಕೆಲವು ವಕೀಲರು ನಡೆಸಿರುವ ಹಿಂಸಾಚಾರದ ಕುರಿತು ವಿಶೇಷ ತನಿಖೆ ತಂಡದಿಂದ ತನಿಖೆಗೆ ಆದೇಶಿಸುವಂತೆ ಕೋರಿ ಕಾಮಿನಿ ಜೈಸ್ವಾಲ್ ಎಂಬ ವಕೀಲೆ ಮನವಿಯೊಂದನ್ನು ದಾಖಲಿಸಿದ್ದರು. ಸುಪ್ರೀಂಕೋರ್ಟ್ ಮುಂದಿನ ವಿಚಾರಣೆಯನ್ನು ಮಾ.4ಕ್ಕೆ ನಿಗದಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News