×
Ad

ಜೆಎನ್‌ಯು ಪ್ರಕರಣ ‘ದೇಶದ್ರೋಹ’ವಲ್ಲ: ಚಿದಂಬರಂ

Update: 2016-02-26 23:59 IST

ಹೊಸದಿಲ್ಲಿ, ಫೆ.26: ದೇಶದ್ರೋಹದ ಆರೋಪದಲ್ಲಿ ಜವಾಹರಲಾಲ್ ನೆಹರೂ ವಿವಿ ವಿದ್ಯಾರ್ಥಿಗಳ ವಿರುದ್ಧ ಕೇಂದ್ರ ಸರಕಾರ ದಾಖಲಿಸಿರುವ ಪ್ರಕರಣ ತುಂಬಾ ದುರ್ಬಲ ವಾಗಿದೆಯೆಂದು ಮಾಜಿ ವಿತ್ತ ಹಾಗೂ ಗೃಹ ಸಚಿವ ಪಿ.ಚಿದಂಬರಂ ಬಣ್ಣಿಸಿದ್ದಾರೆ. ಕಾನೂನು ಜ್ಞಾನ ಚೆನ್ನಾಗಿರುವ ಯಾವುದೇ ನ್ಯಾಯವಾದಿಗೆ, ಇದು ದೇಶದ್ರೋಹದ ಕೃತ್ಯವಲ್ಲವೆಂದು ಆರಂಭದಲ್ಲೇ ತಿಳಿದುಬರುವುದೆಂದು ಅವರು ಹೇಳಿದ್ದಾರೆ.

 ಮಾವೋವಾದಿ ಚಳವಳಿಯ ಬಗ್ಗೆ ಕೆಲವು ವಿದ್ಯಾರ್ಥಿಗಳು ಸಹಾನುಭೂತಿ ಹೊಂದಿರುವ ಸಾಧ್ಯತೆಯಿದೆ. ಆದರೆ ಅವರ ಈ ನಿಲುವು ಹಿಂಸೆಯನ್ನು ಪ್ರಚೋದಿಸದೆ ಇದ್ದಲ್ಲಿ ಅದನ್ನು ದೇಶದ್ರೋಹದ ಪ್ರಕರಣವೆಂದು ಪರಿಗಣಿಸಲು ಸಾಧ್ಯವಿಲ್ಲವೆಂದು ಚಿದಂಬರಂ ‘ದಿ ಹಿಂದೂ’ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
‘‘ಪಾಕಿಸ್ತಾನ್ ಝಿಂದಾಬಾದ್ ಘೋಷಣೆಯು, ಪ್ರತಿದಿನವೂ ಕಾಶ್ಮೀರದಲ್ಲಿ ಕೇಳಿಬರುತ್ತಿದೆ. ಪಂಜಾಬ್‌ನಲ್ಲಿಯೂ ಖಲಿಸ್ತಾನ್ ಪರ ಘೋಷಣೆಗಳು ಪ್ರತಿವಾರವೂ ಕೇಳಲ್ಪಡುತ್ತಿದೆ. ತಮಿಳುನಾಡಿನಲ್ಲಿ ಎಲ್ಟಿಟಿಇಯನ್ನು ಪ್ರಶಂಸಿಸುವ ಜನರಿದ್ದಾರೆ ಹಾಗೂ ಮಾಜಿ ಪ್ರಧಾನಿ ರಾಜೀವ್‌ಗಾಂಧಿಯ ಹತ್ಯೆಯ ಹಿಂದಿರುವ ಎಲ್ಟಿಟಿಇ ಉಗ್ರರನ್ನು ವೈಭವೀಕರಿಸುವವರೂ ಇದ್ದಾರೆ. ಇದು ಖಂಡಿತವಾಗಿಯೂ ಅಸ್ವೀಕಾರಾರ್ಹ ಹಾಗೂ ಶಿಕ್ಷಾರ್ಹವಾಗಿದೆ. ಆದರೆ ಇವನ್ನು ದೇಶದ್ರೋಹವೆಂದು ಪರಿಗಣಿಸಿ, ದಂಡಿಸಲು ಸಾಧ್ಯವಿದೆಯೇ? ಎಂದವರು ಪ್ರಶ್ನಿಸಿದ್ದಾರೆ.
ಕಾನೂನಿನ ಸರಿಯಾದ ಜ್ಞಾನವಿರುವ ಯಾವುದೇ ನ್ಯಾಯವಾದಿಗೂ ಇದು ದೇಶದ್ರೋಹದ ಪ್ರಕರಣವಲ್ಲವೆಂದು ಸುಲಭವಾಗಿ ತಿಳಿಯುತ್ತದೆ ಎಂದರು.
ಇಂದು ಕೂಡಾ, ದಿಲ್ಲಿ ಪೊಲೀಸ್ ಆಯುಕ್ತರು ಕನ್ಹಯ್ಯ ಕುಮಾರ್ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಿರುವುದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಕನ್ಹಯ್ಯಾ ಅವರ ಭಾಷಣವು ದೇಶದ್ರೋಹದ ಕಾನೂನಿಗೆ ಒಳಪಡುವುದಿಲ್ಲ ಎಂದರು.
 ದಾದ್ರಿಯಲ್ಲಿ ಗೋಮಾಂಸ ಸಂಗ್ರಹಿಸಿಟ್ಟ ಆರೋಪದಲ್ಲಿ ಮುಹಮ್ಮದ್ ಅಖ್ಲಾಕ್‌ನ ಹತ್ಯೆ, ಹೈದರಾಬಾದ್‌ನಲ್ಲಿ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸರಕಾರವು ಚರ್ಚೆಯನ್ನೇರ್ಪಡಿಸುವ ಮೂಲಕ ಕೋಮುಧ್ರುವೀಕರಣಕ್ಕೆ ಪ್ರಯತ್ನಿಸುತ್ತಿದೆ ಹಾಗೂ ಆಹಾರ ಮತ್ತು ಉದ್ಯೋಗದ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆಯೆಂದು ಚಿದಂಬಂರಂ ಆಪಾದಿಸಿದರು.
ದಾದ್ರಿ ಹಾಗೂ ಜೆಎನ್‌ಯುನಂತಹ ಪ್ರಕರಣಗಳಿಂದ ಕಾಶ್ಮೀರದ ಮೇಲೆ ಗಂಭೀರವಾದ ಪರಿಣಾಮಗಳುಂಟಾಗುತ್ತವೆಯೆಂದು ಚಿದಂಬರಂ ತಿಳಿಸಿದರು. ಆದರೆ ಸಂಸತ್ ದಾಳಿ ಪ್ರಕರಣದಲ್ಲಿ ಅಫ್ಝಲ್‌ಗುರುವಿನ ಅಪರಾಧಿತ್ವದ ಬಗ್ಗೆ ಕಾಂಗ್ರೆಸ್ ನೇತೃತ್ವದ ಸರಕಾರಕ್ಕೆ ಸಂದೇಹವಿತ್ತೆಂಬುದನ್ನು ಅವರು ನಿರಾಕರಿಸಿದರು.
ಸಂಸತ್ ದಾಳಿ ಪ್ರಕರಣವನ್ನು ಸರಿಯಾಗಿ ತೀರ್ಮಾನಿಸಲಾಗಿಲ್ಲ ಹಾಗೂ ಈ ಪ್ರಕರಣದಲ್ಲಿ ಅಫ್ಝಲ್‌ಗುರು ಶಾಮೀಲಾಗಿರುವುದನ್ನು ಸರಿಯಾಗಿ ಅಂದಾಜಿಸಲಾಗಿಲ್ಲವೆಂಬುದು ನನ್ನ ಅನಿಸಿಕೆಯಾಗಿದೆ. ಯಾರಾದರೂ ಇಂತಹ ಅಭಿಪ್ರಾಯ ಹೊಂದಿದಲ್ಲಿ, ಆತನನ್ನು ದೇಶದ್ರೋಹಿಯೆಂದು ಪರಿಗಣಿಸಲು ಸಾಧ್ಯವಿಲ್ಲ. ಆತ ಕೇವಲ ಭಿನ್ನವಾದ ಅಭಿಪ್ರಾಯವನ್ನು ಹೊಂದಿದ್ದಾನೆಂದಷ್ಟೇ ಹೇಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News